ಕೇಂದ್ರ ಸರಕಾರದ 6.83 ಲಕ್ಷ ಹುದ್ದೆಗಳು ಖಾಲಿ
ಹೊಸದಿಲ್ಲಿ, ನ.27: ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ 6.83 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇರುವುದಾಗಿ ಲೋಕಸಭೆಗೆ ಬುಧವಾರ ತಿಳಿಸಲಾಯಿತು. ಕೇಂದ್ರ ಸರಕಾರದ 38,02,779 ಹುದ್ದೆಗಳ ಪೈಕಿ 31,18,956 ಹುದ್ದೆಗಳನ್ನು 2018ರ ಮಾರ್ಚ್ 1ರೊಳಗೆ ಭರ್ತಿಮಾಡಲಾಗಿದೆಯೆಂದು ಅದು ಹೇಳಿದೆ.
ಖಾಲಿಬಿದ್ದಿರುವ ಹುದ್ದೆಗಳನ್ನು ಭರ್ತಿ ಮಾಡುವುದು ಒಂದು ನಿರಂತರವಾದ ಪ್ರಕ್ರಿಯೆಯಾಗಿದೆ. ಇಲಾಖೆಯು ವರದಿ ಮಾಡಿದ್ದ ಇಲಾಖೆಗಳ ನೇಮಕಾತಿ ಪೂರ್ಣಗೊಂಡ ಬಳಿಕ ಕೆಲವು ನೂತನ ಹುದ್ದೆಗಳು ಸೃಷ್ಟಿಯಾಗುತ್ತವೆ’’ ಎಂದು ಕೇಂದ್ರ ಸರಕಾರದ ಸಿಬ್ಬಂದಿ ಖಾತೆ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕಳೆದ ಎರಡು ಮೂರು ವರ್ಷಗಳಿಂದ ಖಾಲಿ ಬಿದ್ದಿರುವ ಹುದ್ದೆಗಳನ್ನು ಭರ್ತಿ ಮಾಡಲಾಗುವುದೇ ಎಂಬ ಪ್ರಶ್ನೆಗೆ ಅವರು, ಅವನ್ನು ರದ್ದುಪಡಿಸಲಾಗುವುದು ಎಂದರು. ಬಳಕೆದಾರ ಇಲಾಖೆಗಳ ವರದಿ ಮಾಡಿರುವ ವರದಿಗಳನ್ನು ಆಧರಿಸಿ, ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಎಸ್ಸಿ)ವು 2019-20ರ ಅವಧಿಯಲ್ಲಿ 1,05,338 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿದೆ ಎಂದು ಸಿಂಗ್ ತಿಳಿಸಿದರು.
2017-18ರಲ್ಲಿ ರೈಲ್ವೆ ಸಚಿವಾಲಯದ ಅಧಿಸೂಚನೆಯಯಂತೆ ನೂತನ ಹಾಗೂ ಭವಿಷ್ಯದಲ್ಲಿ ಬೇಕಾಗುವ ಸಿ ಗ್ರೂಪ್ ಹಾಗೂ ಲೆವೆಲ್-1 ಶ್ರೇಣಿಯ 1,27,573 ಹುದ್ದೆಗಳಿಗೆ ಅವರೆ ಅಧಿಸೂಚನೆಯನ್ನು ಹೊರಡಿಸಲಾಗಿತ್ತು ಎಂದು ಸಚಿವರು ತಿಳಿಸಿದರು.
ಎಸ್ಎಸ್ಸಿ ಮೂಲಕ ನೇಮಕಾತಿ ಮಾಡವುದರ ಹೊರತಾಗಿ ಅಂಚೆ ಇಲಾಖೆಯು ತನ್ನಲ್ಲಿ ಖಾಲಿ ಇರುವ 19,522 ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆಗಳನ್ನು ಆಯೋಜಿಸಿತ್ತು ಹಾಗೂ ಅಧಿಸೂಚನೆ ಹೊರಡಿಸಿತ್ತು ಎಂದು ಅವರು ಹೇಳಿದರು. 4,08,591 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.