ಇ-ಸಿಗರೇಟ್ ನಿಷೇಧ ವಿಧೇಯಕಕ್ಕೆ ಲೋಕಸಭೆ ಅಸ್ತು

ಹೊಸದಿಲ್ಲಿ, ನ.27: ಇಲೆಕ್ಟ್ರಾನಿಕ್ ಸಿಗರೇಟ್‌ಗಳಿಗೆ ಸಂಪೂರ್ಣ ನಿಷೇಧವನ್ನು ಹೇರುವ ವಿಧೇಯಕವನ್ನು ಲೋಕಸಭೆಯು ಬುಧವಾರ ಅಂಗೀಕರಿಸಿದೆ. ಹೊಸ ‘ಫ್ಯಾಶನ್’ ಎಂಬುದಾಗಿ ಕಂಪೆನಿಳು ಪ್ರಚಾರ ಮಾಡುತ್ತಿರುವ ಇಲೆಕ್ಟ್ರಾನಿಕ್ ಸಿಗರೇಟ್‌ನಂತಹ ಅಮಲುಪದಾರ್ಥದ ಪಿಡುಗಿನಿಂದ ಯುವಜನತೆಯನ್ನು ರಕ್ಷಿಸಲು ಈ ಕ್ರಮ ಅನಿವಾರ್ಯವೆಂದು ಅದು ಹೇಳಿದೆ.
ಲೋಕಸಭೆಯಲ್ಲಿ ಇಂದು ಅಂಗೀಕಾರಗೊಂಡ 2019ರ ಇಲೆಕ್ಟ್ರಾನಿಕ್ ಸಿಗರೇಟ್‌ಗಳ ( ಉತ್ಪಾದನೆ, ಉತ್ಪಾದನೆ, ಆಮದು, ರಫ್ತು ಸಾರಿಗೆ, ಮಾರಾಟ, ವಿತರಣೆ, ದಾಸ್ತಾನು ಹಾಗೂ ಜಾಹೀರಾತು) ನಿಷೇಧ ವಿಧೇಯಕವು ಸೆಪ್ಟೆಂಬರ್ 18ರಂದು ಈ ನಿಟ್ಟಿನಲ್ಲಿ ಹೊರಡಿಸಲಾದ ಸುಗ್ರೀವಾಜ್ಞೆಯನ್ನು ತೆರವುಗೊಳಿಸಿ, ಅದರ ಬದಲಿಗೆ ಮಸೂದೆಯಾಗಿ ಜಾರಿಗೆ ಬರಲಿದೆ. ವಿಧೇಯಕಕ್ಕೆ ತಿದ್ದುಪಡಿ ಕೋರಿ ಪ್ರತಿಪಕ್ಷಗಳು ಮಂಡಿಸಿದ ಪ್ರಸ್ತಾವನೆಗಳನ್ನು ಕೂಡಾ ಸದನವು ತಿರಸ್ಕರಿಸಿದೆ. ವಿಧೇಯಕದ ಬಗ್ಗೆ ಮಾತನಾಡಿದ ವರ್ಧನ್ ಅವರು ತಂಬಾಕಿನ ಮೇಲೆ ನಿಷೇಧ ಹೇರದಿರುವುದನ್ನು ಇಸಿಗರೇಟ್‌ನಂತಹ ನೂತನ ವ್ಯಸನವನ್ನು ಪರಿಚಯಿಸಲು ಸಮರ್ಥನೆಯಾಗಕೂಡದು ಎಂದರು.





