ರಾಜಕೀಯ ಪಕ್ಷಗಳ ನೈತಿಕತೆ ಅಧಃಪತನ: ಪೇಜಾವರಶ್ರೀ
ಉಡುಪಿ, ನ.27: ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳನ್ನು ನೋಡು ವಾಗ ಇಂದಿನ ರಾಜಕೀಯ ಪಕ್ಷಗಳ ನೈತಿಕತೆ ಅಧಃಪತನವಾಗಿರುವುದು ಕಂಡುಬರುತ್ತದೆ ಎಂದು ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಪೇಜಾವರ ಮಠದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಪಕ್ಷಕ್ಕೂ ಬಹುಮತ ಬಾರದಿದ್ದರೆ ಎಲ್ಲ ಪಕ್ಷಗಳು ಸಮಾನ ಯೋಜನೆ ಹಾಕಿಕೊಂಡು ಸರಕಾರ ನಡೆಸಬೇಕು. ಆದರೆ ಇಂದು ಕೇವಲ ಅಧಿಕಾರಕ್ಕಾಗಿ ನೈತಿಕತೆ ಇಲ್ಲದೆ ಮೈತ್ರಿ ಮಾಡಿಕೊಳ್ಳಲಾಗುತ್ತಿದೆ. ನೈತಿಕತೆ ಇಲ್ಲದ ಮೈತ್ರಿ ಒಳ್ಳೆಯದಲ್ಲ ಎಂದರು.
ಶಿವಸೇನೆ ಬಿಜೆಪಿಗಿಂತ ಪ್ರಖರ ಹಿಂದುತ್ವವಾದಿ. ಅದರ ಜೊತೆ ಕಾಂಗ್ರೆಸ್ ಮತ್ತು ಎಸ್‌ಸಿಪಿ ಮೈತ್ರಿ ಮಾಡಿಕೊಂಡಿದೆ. ಅದೇ ರೀತಿ ಬಿಜೆಪಿಯು ಎನ್‌ಸಿಪಿ ಜೊತೆ ಮೈತಿ ಮಾಡಿಕೊಂಡಿದೆ. ಇದೆಲ್ಲವೂ ಯಾವುದೇ ಪಕ್ಷಕ್ಕೂ ನೈತಿಕ ಮೌಲ್ಯ ಇಲ್ಲ ಎಂಬುದು ತೋರಿಸುತ್ತದೆ ಎಂದು ಅವರು ತಿಳಿಸಿದರು.
ರಾಜಕೀಯ ಮೌಲ್ಯಗಳ ಅಧಃಪತನ ಆಗುತ್ತಿದೆ. ಕರ್ನಾಟಕದ ರೀತಿಯಲ್ಲೇ ಮಹಾರಾಷ್ಟ್ರದಲ್ಲಿ ನಡೆಯುತ್ತಿದೆ. ಯಾರಿಗೂ ಬಹುಮತ ಇಲ್ಲದ ಸಂದರ್ಭ ಒಂದಾ ಮರು ಚುನಾವಣೆ ನಡೆಸಬೇಕು. ಇಲ್ಲದಿದ್ದರೆ ಎಲ್ಲರು ಸೇರಿ ಆಡಳಿತ ನಡೆಬೇಕು ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಉಪಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಾರದಿದ್ದರೆ ಮರು ಚುನಾವಣೆ ಆಗಬೇಕು. ಇಲ್ಲದಿದ್ದರೆ ಬೇರೆ ಮಾರ್ಗವೇ ಇಲ್ಲ. ಇಲ್ಲವೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕು. ಏಕಪಕ್ಷೀಯ ಸರಕಾರ ರಚನೆ ಯಾದರೆ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಮೈತ್ರಿ ಸರಕಾರ ಯಶಸ್ವಿ ಯಾಗುತ್ತಿಲ್ಲ ಎಂದರು.
ಮುಸ್ಲಿಮರ ಒಂದು ತಂಡ ಸುಪ್ರೀಂ ಕೋರ್ಟಿಗೆ ಪುನರ್ ಪರಿಶೀಲನಾ ಅರ್ಜಿ ಹಾಕದಿರಲು ನಿರ್ಧರಿಸಿರುವುದು ದೇಶದ ದೃಷ್ಠಿಯಿಂದ ಒಳ್ಳೆಯದು. ಆದರೆ ಇನ್ನೊಂದು ತಂಡ ಹಾಕುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸ್ವೀಕಾರ ಮಾಡುವುದು ಸಂಶಯ. ಯಾಕೆಂದರೆ ಈ ತೀರ್ಪನ್ನು ಸುಪ್ರೀಂ ಕೋರ್ಟಿನ ಐದು ಮಂದಿ ನ್ಯಾಯಮೂರ್ತಿಗಳು ಒಮ್ಮತದಿಂದ ನೀಡಿರುವುದಾಗಿದೆ ಎಂದು ಅವರು ತಿಳಿಸಿದರು.







