ಹೂಳು ತೆಗೆಯಲು ಅಡ್ಡಿಪಡಿಸಿದರೆ ಕಾನೂನು ಕ್ರಮ
ಉಡುಪಿ, ನ.27: ಹಿರಿಯಡ್ಕದ ಸ್ವರ್ಣ ನದಿಯ ಬಜೆ ಡ್ಯಾಂನಿಂದ ಶೀರೂರು ಡ್ಯಾಮ್‌ವರೆಗೆ ಸುಮಾರು 7 ಕಿ.ಮೀ. ದೂರ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೂಳು ತೆಗೆಯಲು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಉಡುಪಿ ನಗರಸಭೆಯಿಂದ ಟೆಂಡರ್ ಕರೆದಿದ್ದು, ಮಂಗಳೂರಿನ ಯೋಜಕಾ ಇಂಡಿಯಾ ಕಂಪೆನಿ ಗುತ್ತಿಗೆಯನ್ನು ವಹಿಸಿಕೊಂಡಿದೆ.
ನದಿಯಿಂದ ತೆಗೆದ ಹೂಳಿನಿಂದ ಮರಳು ಬೇರ್ಪಡಿಸಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ನೀಡುವ ಉದ್ದೇಶ ಜಿಲ್ಲಾಡಳಿತ ಹೊಂದಿದೆ. ಆದುದರಿಂದ ಹೊಳೆಯ ಅಕ್ಕಪಕ್ಕ ಗುತ್ತಿಗೆದಾರರಿಗೆ ಮತ್ತು ವಾಹನ/ ಯಂತ್ರಗಳಿಗೆ ಚಲಿಸಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ, ಇದಕ್ಕೆ ವಿರುದ್ಧವಾಗಿ ಯಾರಾದರೂ ಗುತ್ತಿಗೆದಾರರಿಗೆ ಹಾಗೂ ಅವರ ಡ್ರಜ್ಜಿಂಗ್ ಯಂತ್ರಗಳಿಗೆ ತೊಂದರೆ ಉಂಟು ಮಾಡಿದ್ದಲ್ಲಿ ಯಾ ಹಾನಿ ಮಾಡಿದ್ದಲ್ಲಿ ಹಾಗೂ ಟಿಪ್ಪರ್ ಲಾರಿಗಳಿಗೆ ನದಿಯ ದಂಡೆಯ ಜಾಗದಲ್ಲಿ ಚಲಿಸಲು ತೊಂದರೆ ನೀಡಿದಲ್ಲಿ ಅಂತಹವರ ವಿರುದ್ಧ ನಿಯಮಾನುಸಾರ ಮೊಕದ್ದಮೆ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





