53ನೇ ಬಾರಿಗೆ ದಕ್ಷ ಐಎಎಸ್ ಅಧಿಕಾರಿಯ ವರ್ಗಾವಣೆ
ಫೋಟೊ: AshokKhemka_IAS
ಚಂಡೀಗಢ, ನ.26: ಹರ್ಯಾಣ ಸರಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಶೋಕ್ ಖೇಮ್ಕಾ ಅವರನ್ನು ದಾಖಲೆಗಳ ಇಲಾಖೆಗೆ ವರ್ಗಾಯಿಸಲಾಗಿದೆ. ದಕ್ಷ ಐಎಎಸ್ ಅಧಿಕಾರಿಯೆನಿಸಿರುವ ಖೇಮ್ಕಾ ಅವರ 28 ವರ್ಷಗಳ ಸೇವಾವಧಿಯಲ್ಲಿ ಇದು ಅವರ 53ನೇ ವರ್ಗಾವಣೆಯಾಗಿದೆ. ಕಳೆದ ವರ್ಷದ ಮಾರ್ಚ್ನಲ್ಲಿ ಅವರನ್ನು ಕ್ರೀಡಾ ಹಾಗೂ ಯುವಜನ ವ್ಯವಹಾರ ಇಲಾಖೆಗೆ ವರ್ಗಾಯಿಸಲಾಗಿದ್ದು, ಅಲ್ಲಿ ಅವರು 15 ತಿಂಗಳುಗಳ ಕಾಲ ಸೇವೆ ಸಲ್ಲಿಸಿದ್ದರು.
‘‘ಮತ್ತೊಮ್ಮೆ ವರ್ಗಾವಣೆಯಾಗಿದೆ. ಸಂವಿಧಾನದ ದಿನವನ್ನು ನಾವು ಆಚರಿಸಿದ ಮರುದಿನವೇ ಸುಪ್ರೀಂಕೋರ್ಟ್ನ ಆದೇಶ ಹಾಗೂ ನಿಯಮಗಳನ್ನು ಮತ್ತೊಮ್ಮೆ ಉಲ್ಲಂಘಿಸಲಾಗಿದೆ. ಕೊನೆಗೂ ಮೂಲೆಗುಂಪು ಮಾಡಲಾಗಿದೆ. ಅಪಮಾನವೇ ಪ್ರಾಮಾಣಿಕತೆಗೆ ದೊರೆಯುವ ಪುರಸ್ಕಾರವಾಗಿದೆ ’’ ಎಂದು ಖೇಮ್ಕಾ ಟ್ವೀಟ್ ಮಾಡಿದ್ದಾರೆ.
1991ನೇ ಸಾಲಿನ ಐಎಎಸ್ ಅಧಿಕಾರಿಯಾದ ಅಶೋಕ್ ಖೇಮ್ಕಾ ಅವರು ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರ ಅಳಿಯ ರಾಬರ್ಟ್ ವಾಧ್ರಾ ಅವರ ಸ್ಕೈಲೈಟ್ ಹಾಸ್ಪಿಟಾಲಿಟಿ ಹಾಗೂ ರಿಯಲ್ಎಸ್ಟೇಟ್ ಸಂಸ್ಥೆ ಡಿಎಲ್ಎಫ್ ನಡುವೆ ಭೂವ್ಯವಹಾರವನ್ನು ರದ್ದುಪಡಿಸುವ ಮೂಲಕ ರಾಷ್ಟ್ರದಾದ್ಯಂತ ಗಮನಸೆಳೆದಿದ್ದರು.