ಚುನಾವಣೆ ಬಳಿಕ ರಮೇಶ್ ಜಾರಕಿಹೊಳಿಯನ್ನು ಬಿಜೆಪಿ ಮೂಸಿಯೂ ನೋಡಲ್ಲ: ದಿನೇಶ್ ಗುಂಡೂರಾವ್

ಬೆಳಗಾವಿ, ನ. 27: ಉಪಚುನಾವಣಾ ಫಲಿತಾಂಶ ಬಂದು ಒಂದೇ ವಾರದಲ್ಲಿ ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಪಕ್ಷ ಬಿಡುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭವಿಷ್ಯ ನುಡಿದಿದ್ದಾರೆ.
ಬುಧವಾರ ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿರುವ ಮುಕ್ತ ವಾತಾವರಣ ಬಿಜೆಪಿಯಲ್ಲಿ ಇಲ್ಲ. ಚುನಾವಣೆ ಮುಗಿದ ಮೇಲೆ ಬಿಜೆಪಿ ರಮೇಶ್ ಅವರನ್ನು ಮೂಸಿಯೂ ನೋಡುವುದಿಲ್ಲ ಎಂದು ಎಚ್ಚರಿಸಿದರು.
ರಮೇಶ್ ಜಾರಕಿಹೊಳಿ ಯಾವ ಕಾರಣಕ್ಕಾಗಿ ಪಕ್ಷ ಬಿಟ್ಟರು ಎಂದು ಇಂದಿಗೂ ಅರ್ಥ ಆಗಿರಲಿಲ್ಲ. ಇದೀಗ ಅವರೇಕೆ ಪಕ್ಷ ಬಿಟ್ಟರೆಂದು ಹೇಳಲು ಸಾಧ್ಯವಿಲ್ಲ. ಸತೀಶ್ ಜಾರಕಿಹೊಳಿ ಅವರನ್ನು ಸಚಿವ ಸ್ಥಾನದಿಂದ ಇಳಿಸಿ ರಮೇಶ್ ಅವರನ್ನು ಸಚಿವರನ್ನಾಗಿ ಮಾಡಲಾಗಿತ್ತು ಎಂದು ಹೇಳಿದರು.
ರಾಜ್ಯದಲ್ಲಿ ‘ಜಾರಕಿಹೊಳಿ ಬ್ರಾಂಡ್’ ಹೆಸರುವಾಸಿ ಆಗಿದೆ ಅಂದರೆ ಅದಕ್ಕೆ ಸತೀಶ್ ಜಾರಕಿಹೊಳಿ ಜನಸೇವೆಯೇ ಮೂಲ ಕಾರಣ. ಬಾಲಚಂದ್ರ ಜಾರಕಿಹೊಳಿ ಆಪರೇಷನ್ ಕಮಲಕ್ಕೆ ಖ್ಯಾತಿ ಗಳಿಸಿದ್ದಾರೆ. ಅದೇ ರೀತಿ ರಮೇಶ್ ಕೂಡ ಯಾವುದೇ ಉಪಕಾರ ಆಗುವಂತಹ ಕೆಲಸ ಮಾಡಲಿಲ್ಲ ಎಂದು ಟೀಕಿಸಿದರು.







