ಬಿಜೆಪಿ ಸೇರ್ಪಡೆಯ ಗುಟ್ಟು ಬಿಚ್ಚಿಟ್ಟ ರಮೇಶ್ ಜಾರಕಿಹೊಳಿ

ಬೆಳಗಾವಿ, ನ.27: ಕಾಂಗ್ರೆಸ್ ಪಕ್ಷದಲ್ಲಿನ ಸರ್ವಾಧಿಕಾರದಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ರಾಜ್ಯದಲ್ಲಿ ಸ್ಥಿರ ಆಡಳಿತ ಇರಬೇಕೆಂಬ ಉದ್ದೇಶದಿಂದ ಬಿಜೆಪಿ ಸೇರ್ಪಡೆಯಾಗಿ, ಮತ್ತೊಮ್ಮೆ ನಿಮ್ಮ ಆಶೀರ್ವಾದ ಪಡೆಯಲು ಬಂದಿದ್ದೇನೆ ಎಂದು ಗೋಕಾಕ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬುಧವಾರ ಗೋಕಾಕ್ ತಾಲೂಕಿನ ಮೇಲ್ಮಟ್ಟಿ ಹಾಗೂ ಕುಂದರಗಿ ಗ್ರಾಮಗಳಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಆವರು, ಬಿಜೆಪಿ ಸೇರಬೇಕೆಂಬ ನನ್ನ ನಿರ್ಣಯವನ್ನು ಕ್ಷೇತ್ರದ ಮತದಾರರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ಸ್ಪೀಕರ್ ನಮ್ಮನ್ನು ಕಾನೂನು ಬಾಹಿರವಾಗಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರಿಂದ ನಾವು ಅನಿವಾರ್ಯವಾಗಿ ಕಾನೂನು ಹೋರಾಟ ಮಾಡಬೇಕಾಯಿತು. ಈ ವೇಳೆ ಕ್ಷೇತ್ರದಲ್ಲಿನ ನಮ್ಮ ವಿರೋಧಿಗಳು, ನನ್ನ ರಾಜಕೀಯ ಜೀವನ ಮುಗಿಯಿತು ಎಂದು ಅಪಪ್ರಚಾರದಲ್ಲಿ ತೊಡಗಿದ್ದರು ಎಂದು ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ದೇವರು ಹಾಗೂ ನನ್ನ ತಾಲೂಕಿನ ಜನರ ಆಶೀರ್ವಾದದಿಂದ ಸುಪ್ರೀಂಕೋರ್ಟ್ ಈ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ನಮಗೆ ಅವಕಾಶ ನೀಡಿದೆ. ಇದರಿಂದ, ಅಪಪ್ರಚಾರದಲ್ಲಿ ತೊಡಗಿದ್ದ ವಿರೋಧಿ ಪಾಳಯದಲ್ಲಿ ನಡುಕ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.
ಪ್ರತಿ ಬಾರಿಯೂ ನಾನು ಕಾಂಗ್ರೆಸ್ ಪಕ್ಷದ ಹಸ್ತದ ಚಿಹ್ನೆ ಯಡಿ ಸ್ಪರ್ಧಿಸುತ್ತಿದೆ. ಆದರೆ, ಬದಲಾದ ರಾಜಕೀಯ ಸನ್ನಿವೇಶ ಹಾಗೂ ಕ್ಷೇತ್ರದ ಜನತೆಯ ಬಯಕೆಯಂತೆ ಬಿಜೆಪಿ ಪಕ್ಷದ ಕಮಲದ ಹೂವಿನ ಚಿಹ್ನೆಯಡಿ ಕಣಕ್ಕಿಳಿದಿದ್ದೇನೆ. ಮತ್ತೊಮ್ಮೆ ನನಗೆ ಆಶೀರ್ವಾದ ಮಾಡಿ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಅವರು ಮನವಿ ಮಾಡಿದರು. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಮುಂದುವರೆಯಬೇಕು. ಅವರ ಕೈ ಬಲಪಡಿಸಿ, ಕ್ಷೇತ್ರದ ಸರ್ವತೋಮುಖ ಪ್ರಗತಿಗಾಗಿ ಮತದಾರರು ಬಿಜೆಪಿಗೆ ಆಶೀರ್ವಾದ ಮಾಡಬೇಕು. ಯಡಿಯೂರಪ್ಪ ಎಂದಿಗೂ ಮಾತು ತಪ್ಪುವುದಿಲ್ಲ. ಈ ಇಳಿ ವಯಸ್ಸಿನಲ್ಲೂ ರಾಜ್ಯದ ಅಭಿವೃದ್ಧಿ ಹಾಗೂ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಕಾಯಕಯೋಗಿ ಎಂದು ರಮೇಶ್ ಜಾರಕಿಹೊಳಿ ಮೆಚ್ಚುಗೆ ವ್ಯಕ್ತಪಡಿಸಿದರು.







