ಬೆಂಗಳೂರು: ಟ್ರಾನ್ಸ್‌ಜೆಂಡರ್ ಹಕ್ಕುಗಳ ಸಂರಕ್ಷಣಾ ಮಸೂದೆ ರದ್ದತಿಗೆ ಒತ್ತಾಯಿಸಿ ಧರಣಿ

ಬೆಂಗಳೂರು, ನ.27: ಟ್ರಾನ್ಸ್‌ಜೆಂಡರ್ ಹಕ್ಕುಗಳ ಸಂರಕ್ಷಣಾ ಮಸೂದೆ-2019ಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಬಾರದು ಎಂದು ಒತ್ತಾಯಿಸಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಲೈಂಗಿಕ ಅಲ್ಪಸಂಖ್ಯಾತರ ಭಾವನೆಗಳಿಗೆ ಸ್ಪಂದಿಸದೆ ಹಾಗೂ ಯಾವುದೇ ಚರ್ಚೆಯಿಲ್ಲದೆ ರಾಜ್ಯಸಭೆಯಲ್ಲಿ ಅಂಗೀಕೃತಗೊಂಡು ರಾಷ್ಟ್ರಪತಿಗಳ ಸಹಿಗೆ ಕಳುಹಿಸಿಕೊಡಲಾಗಿದೆ. ಇದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾಗಿದೆ. ಹೀಗಾಗಿ ರಾಷ್ಟ್ರಪತಿಗಳು ಈ ಮಸೂದೆಗೆ ಅಂಗೀಕಾರ ಹಾಕಬಾರದು ಎಂದು ಸಮುದಾಯದ ಮುಖಂಡ ಮಲ್ಲಪ್ಪ ಆಗ್ರಹಿಸಿದ್ದಾರೆ.
ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಟ್ರಾನ್ಸ್‌ಜೆಂಡರ್ ಹಕ್ಕುಗಳ ಸಂರಕ್ಷಣಾ ಮಸೂದೆ ಈ ಹಿಂದಿನ ಸುಪ್ರೀಂ ಕೋರ್ಟ್‌ಗೆ ವಿರುದ್ಧವಾಗಿದೆ. ಇದು ಜಾರಿಯಾದರೆ ಲೈಂಗಿಕ ಅಲ್ಪಸಂಖ್ಯಾತರು ಮತ್ತಷ್ಟು ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಹೀಗಾಗಲೇ ಸಮಸ್ಯೆಗಳಿಂದ ಬಳಲುತ್ತಿರುವ ನಮ್ಮನ್ನು ಕೇಂದ್ರ ಸರಕಾರ ಮತ್ತಷ್ಟು ಸಮಸ್ಯೆಗಳಿಗೆ ನೂಕಬಾರದು. ಹೀಗಾಗಿ ರಾಷ್ಟ್ರಪತಿಗಳು ಈ ಮಸೂದೆಯ ಪರಿಶೀಲನೆಗೆ ಸಮಿತಿಯನ್ನು ರಚಿಸಿ ಅಧ್ಯಯನಕ್ಕೆ ಒಳಪಡಿಸಲಿ ಎಂದು ಅವರು ಆಗ್ರಹಿಸಿದರು.
ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ನಮ್ಮ ಸಂವಿಧಾನದಲ್ಲಿ ಎಲ್ಲ ಸಮುದಾಯಕ್ಕೂ ಸಮಾನವಾದ ಹಕ್ಕುಗಳು, ಸೌಲಭ್ಯಗಳನ್ನು ನೀಡಲಾಗಿದೆ. ಕೇವಲ ಅಧಿಕಾರ ಸಿಕ್ಕಿದ ತಕ್ಷಣ, ತಮಗೆ ತೋಚಿದಂತೆ ನಿರ್ಣಯಗಳನ್ನು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ಹೀಗಾಗಿ ಲೈಂಗಿಕ ಅಲ್ಪಸಂಖ್ಯಾತರು ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಟ್ರಾನ್ಸ್‌ಜೆಂಡರ್ ಹಕ್ಕುಗಳ ಸಂರಕ್ಷಣಾ ಮಸೂದೆಯನ್ನು ವಿರೋಧಿಸುತ್ತಿದ್ದಾರೆ. ಇದಕ್ಕೆ ಜನಪ್ರತಿನಿಧಿಗಳು ಮಾನ್ಯತೆ ಕೊಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ವಕೀಲ ಸಿ.ಎಸ್.ದ್ವಾರಕಾನಾಥ್ ಸೇರಿದಂತೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ನೂರಾರು ಮಂದಿ ಭಾಗವಹಿಸಿ, ಟ್ರಾನ್ಸ್‌ಜೆಂಡರ್ ಹಕ್ಕುಗಳ ಸಂರಕ್ಷಣಾ ಮಸೂದೆ-2019ರ ವಿರುದ್ಧ ಧಿಕ್ಕಾರ ಕೂಗಿದರು.







