ಮಹಾರಾಷ್ಟ್ರಕ್ಕೆ ಎನ್‌ಸಿಪಿಯ ಡಿಸಿಎಂ, ಕಾಂಗ್ರೆಸ್‌ನ ಸ್ಪೀಕರ್

ಮುಂಬೈ, ನ.27: ಶಿವಸೇನೆಯ ವರಿಷ್ಠ ಉದ್ಧವ್ ಠಾಕ್ರೆ ಅವರು ಗುರುವಾರ ಸಂಜೆ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದು,ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟವು ಅಧಿಕಾರ ಹಂಚಿಕೆ ವಿವರಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಮಹಾರಾಷ್ಟ್ರವು ಒಬ್ಬರೇ ಉಪ ಮುಖ್ಯಮಂತ್ರಿಯನ್ನು ಹೊಂದಿರಲಿದ್ದು,ಆ ಹುದ್ದೆಯು ಎನ್‌ಸಿಪಿಗೆ ದೊರೆಯಲಿದೆ ಮತ್ತು ಸ್ಪೀಕರ್ ಹುದ್ದೆ ಕಾಂಗ್ರೆಸ್‌ನ ಮಡಿಲು ಸೇರಲಿದೆ ಎಂದು ಎನ್‌ಸಿಪಿ ನಾಯಕ ಪ್ರಫುಲ್ಲ ಪಟೇಲ್ ಅವರು ‘ ಮಹಾ ವಿಕಾಸ ಅಘಾಡಿ ’ಯ ಆರು ಗಂಟೆಗಳ ಮಾತುಕತೆಗಳ ಬಳಿಕ ಪ್ರಕಟಿಸಿದರು.
ಉದ್ಧವ್ ಎನ್‌ಸಿಪಿ ಮತ್ತು ಕಾಂಗ್ರೆಸ್‌ನಿಂದ ತಲಾ ಓರ್ವರಂತೆ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಹೊಂದಲಿದ್ದಾರೆ ಎಂದು ಈ ಮೊದಲು ವರದಿಗಳು ತಿಳಿಸಿದ್ದವು. ಉದ್ಧವ ಜೊತೆ ಪ್ರಮಾಣ ವಚನ ಸ್ವೀಕರಿಸುವ ಸಚಿವರ ಹೆಸರುಗಳನ್ನು ಗುರುವಾರ ಬೆಳಿಗ್ಗೆ ಪ್ರಕಟಿಸಲಾಗುವುದು ಎಂದು ಪಟೇಲ್ ತಿಳಿಸಿದರು.
ಮಹಾರಾಷ್ಟ್ರವು 43 ಸಚಿವ ಹುದ್ದೆಗಳನ್ನು ಹೊಂದಿದ್ದು ಶಿವಸೇನೆ 15, ಎನ್‌ಸಿಪಿ 15 ಮತ್ತು ಕಾಂಗ್ರೆಸ್ 12 ಸಚಿವರನ್ನು ಪಡೆಯಲಿವೆ ಎಂದು ಹೇಳಲಾಗಿದೆ. ಆದರೆ ಸರಕಾರಕ್ಕೆ ಬೆಂಬಲ ಸೂಚಿಸಿರುವ ಸ್ವಾಭಿಮಾನಿ ಸಂಘಟನಾ ಮತ್ತು ಎಸ್‌ಪಿಯಂತಹ ಸಣ್ಣ ಪಕ್ಷಗಳಿಗೂ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಅನಿವಾರ್ಯತೆಯಿದೆ.







