ಮೇಯರ್ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಬಾರದು: ಹೈಕೋರ್ಟ್ ಪ್ರಶ್ನೆ
ರಸ್ತೆ ಗುಂಡಿ ದುರಂತಕ್ಕೆ ಬಿಬಿಎಂಪಿ ಪರಿಹಾರ

ಬೆಂಗಳೂರು, ನ.27: ರಸ್ತೆ ಗುಂಡಿಗಳಿಂದ ಸಾವನ್ನಪ್ಪುವವರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಯರ್, ಉಪ ಮೇಯರ್ ಹಾಗೂ ಆಡಳಿತ ಪಕ್ಷದ ನಾಯಕರ ಹೆಸರನ್ನು ನ.28ರಂದು ನೀಡಲು ಸೂಚಿಸಿ, ಇವರ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಬಾರದೆಂದು ಹೈಕೋರ್ಟ್ ಮೌಖಿಕವಾಗಿ ಪ್ರಶ್ನಿಸಿದೆ.
ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ರಸ್ತೆ ಗುಂಡಿಗಳಿಂದ ಸಾವನ್ನಪ್ಪುವವರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ದಿನ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿ ಎಂದು ನ್ಯಾಯಪೀಠವು ಆದೇಶ ಹೊರಡಿಸಿದ್ದರೂ ಇಲ್ಲಿಯವರೆಗೂ ನೀವು ಏಕೆ ಜಾಹೀರಾತು ಹೊರಡಿಸಿಲ್ಲ. ಸೆಕ್ಷನ್ 77ಅನ್ನು ಯಾಕೆ ಜಾರಿಗೆ ತಂದಿಲ್ಲ. ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಲು ಕೌನ್ಸಿಲ್ ಸಭೆ ನಡೆಸುವ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದ ನ್ಯಾಯಪೀಠವು. ನ.28ರಂದು ಮೇಯರ್, ಉಪಮೇಯರ್ ಅವರ ಹೆಸರನ್ನು ನೀಡಲು ಸೂಚಿಸಿತು.
ಬಿಬಿಎಂಪಿ ಪರ ವಾದಿಸಿದ ವಕೀಲರು, ಕೋರ್ಟ್ ಆದೇಶವನ್ನು ಪಾಲಿಸಲು ಒಂದು ವಾರ ಸಮಯಾವಕಾಶ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. ನ್ಯಾಯಪೀಠವು ಒಂದು ವಾರ ಅಲ್ಲ. ಒಂದು ದಿನವೂ ಸಮಯಾವಕಾಶ ನೀಡುವುದಿಲ್ಲ ಎಂದು ಹೇಳಿತು.
ಮೂಲಭೂತ ಹಕ್ಕು: ಸಂವಿಧಾನದ ಪರಿಚ್ಛೇದ 21ರ ಪ್ರಕಾರ ವ್ಯಕ್ತಿ ಘನತೆಯಿಂದ ಬದುಕುವುದು ಆತನ ಮೂಲಭೂತ ಹಕ್ಕು. ಆ ವ್ಯಾಖ್ಯಾನವನ್ನು ಸುಪ್ರೀಂಕೋರ್ಟ್ ವಿಸ್ತರಿಸಿ, ಸುಸ್ಥಿತಿಯ ರಸ್ತೆ ಹೊಂದುವುದು ಹಾಗೂ ಅದರಲ್ಲಿ ಸಂಚರಿಸುವುದು ಜನರ ಮೂಲಭೂತ ಹಕ್ಕು ಎಂದು ಹೇಳಿದೆ. ಅದರಂತೆ ರಸ್ತೆಗಳು ದುಸ್ಥಿತಿಯಲ್ಲಿದ್ದರೆ ಜನರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಜನ ಸುಗಮವಾಗಿ ಓಡಾಡಲು ಹಾಗೂ ವಾಹನ ಮೂಲಕ ಸಂಚರಿಸಲು ಅನುಕೂಲವಾದ ಉತ್ತಮ ಗುಣಮಟ್ಟದ ಹಾಗೂ ಬೆಳಕಿನ ವ್ಯವಸ್ಥೆ ಹೊಂದಿದ ರಸ್ತೆ ನಿರ್ಮಿಸಬೇಕೆಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.