ಭಾರತೀಯ ಸಂವಿಧಾನ ಜಗತ್ತಿಗೆ ಮಾದರಿ: ನ್ಯಾ.ಪಿ.ಎಸ್.ದಿನೇಶ್ ಕುಮಾರ್

ಬೆಂಗಳೂರು, ನ.27: ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವು ಸ್ವಾತಂತ್ರ, ಸಮಾನತೆ ಹಾಗೂ ಸೋದರತ್ವ ಎಂಬ ಮೂಲಭೂತ ತತ್ವಗಳನ್ನಿಟ್ಟುಕೊಂಡು ಜಾರಿಗೆ ಬಂದಿದೆ. ಹೀಗಾಗಿ, ನಮ್ಮ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಹೇಳಿದ್ದಾರೆ.
ಬುಧವಾರ ಯುವನಿಕಾದಲ್ಲಿ ಆದಿವಕ್ತ ಪರಿಷದ್ ಆಯೋಜಿಸಿದ್ದ ಕಾನೂನು ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ ಸಿಕ್ಕ ಮೇಲೆ ದೇಶಕ್ಕೆ ತನ್ನದೆ ಆದ ಒಂದು ಸಂವಿಧಾನ ಬೇಕಾಗಿತ್ತು. ಈ ಸಮಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಗೊಂಡ ಸಮಿತಿಯು ಅಮೇರಿಕಾ, ಇಂಗ್ಲೆಂಡ್, ರಷ್ಯಾ ಇನ್ನಿತರ ದೇಶಗಳ ಸಂವಿಧಾನಗಳಲ್ಲಿ ಅಳವಡಿಸಲಾಗಿರುವ ಅಂಶಗಳನ್ನು ತಿಳಿದುಕೊಂಡು, ನಮ್ಮ ದೇಶಕ್ಕೆ ಅನ್ವಯವಾಗುವಂತೆ ಭಾರತೀಯ ಸಂವಿಧಾನವೊಂದನ್ನು ರಚಿಸಲಾಯಿತು ಎಂದು ಹೇಳಿದರು.
ಅಂಬೇಡ್ಕರ್ ಅವರ ದೂರದೃಷ್ಟಿಯಿಂದಾಗಿ ಧ್ವನಿ ಇಲ್ಲದವರಿಗೆ ಆದ್ಯತೆ ನೀಡುವಂತಹ ಕಾನೂನುಗಳನ್ನು ಜಾರಿಗೆ ತಂದರು. ಪ್ರಜಾಪ್ರಭುತ್ವ, ಆರ್ಥಿಕ, ಸಾಮಾಜಿಕ, ರಾಜಕೀಯ ಅಂಶಗಳನ್ನು ಸಂವಿಧಾನದಲ್ಲಿ ಅಳವಡಿಸಿದರು. ಸಂವಿಧಾನದಿಂದಲೇ ಇಂದು ನಮಗೆ ನಮ್ಮ ಹಕ್ಕುಗಳು ಸಿಕ್ಕಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಹಿರಿಯ ವಕೀಲ ಎಂ.ಬಿ.ನರಗುಂದ, ವಕೀಲ ಪ್ರಸನ್ನ ದೇಶಪಾಂಡೆ ಉಪಸ್ಥಿತರಿದ್ದರು.







