ಲಂಚಕ್ಕೆ ಬೇಡಿಕೆ ಇಟ್ಟ ಆರೋಪ: ಇಂಜಿನಿಯರ್ ಗೆ 6 ವರ್ಷ ಜೈಲು

ಮೈಸೂರು,ನ.27: ಕಾಮಗಾರಿ ಹಣ ಬಾಕಿ ಪಾವತಿಗಾಗಿ ಲಂಚಕ್ಕೆ ಬೇಡಿಕೆ ಇಟ್ಟ ಪಿರಿಯಾಪಟ್ಟಣ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಿರಿಯ ಇಂಜಿನಿಯರ್ ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯವು 6 ವರ್ಷ ಜೈಲು ಹಾಗೂ 1.35 ಲಕ್ಷ ರೂ.ದಂಡ ವಿಧಿಸಿದೆ.
ಇಂಜಿನಿಯರ್ ಮನೋಹರ್ ಎಂಬವರೇ ಶಿಕ್ಷೆಗೆ ಒಳಗಾದವರು. ಕೆ.ಆರ್.ನಗರದ ಪ್ರಥಮದರ್ಜೆ ಗುತ್ತಿಗೆದಾರ ಹೆಚ್.ಎಸ್.ಜಗದೀಶ್ 8 ಲಕ್ಷ ವೆಚ್ಚದ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದ್ದರು. ಅರ್ಧ ಕಾಮಗಾರಿ ಮುಗಿದ ಬಳಿಕ 4.28 ಲಕ್ಷ ಪಡೆದಿದ್ದರು. ಕಾಮಗಾರಿ ಪೂರ್ಣಗೊಂಡ ಬಳಿಕ 3.99 ಲಕ್ಷ ಬಿಡುಗಡೆ ಮಾಡಲು 2015ರ ಮಾರ್ಚ್ ತಿಂಗಳಿನಲ್ಲಿ ಮನೋಹರ್ 1.5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದ್ದು, ಈ ಸಂಭಾಷಣೆಯನ್ನು ಧ್ವನಿ ಮುದ್ರಿಸಿಕೊಂಡ ಜಗದೀಶ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಒಂದು ಲಕ್ಷ ಲಂಚ ನೀಡುವಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಮನೋಹರ್ ರನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಭರತ್ ಕುಮಾರ್ ಶಿಕ್ಷೆ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕಲಿಯಂಡ ಮುತ್ತಮ್ಮ ಪೂಣಚ್ಚ ವಾದ ಮಂಡಿಸಿದ್ದರು.





