ನಾನು ಮಾರಾಟವಾಗಿಲ್ಲ: ಬಿ.ಸಿ.ಪಾಟೀಲ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

ಬಳ್ಳಾರಿ, ನ.28: ‘ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ್‌ಗೆ ಜ್ಞಾನ ಇಲ್ಲ. ನಾನು ಯಾವುದೇ ರೀತಿಯಲ್ಲಿಯೂ ಪಕ್ಷಾಂತರ ಮಾಡಿಲ್ಲ. ಅವನಿಗೆ ಅದು ಅರ್ಥವಾಗುತ್ತಿಲ್ಲ’ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಲೇವಡಿ ಮಾಡಿದ್ದಾರೆ.
ಗುರುವಾರ ವಿಜಯನಗರ(ಹೊಸಪೇಟೆ) ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನನ್ನನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿದರು. ಆಗ ಸೋನಿಯಾಗಾಂಧಿ ಪಕ್ಷಕ್ಕೆ ಆಹ್ವಾನಿಸಿದರು. ನಾನಾಗಿ ಜೆಡಿಎಸ್ ಬಿಡಲಿಲ್ಲ. ನಾನು ಮಾರಾಟವಾಗಿಲ್ಲ’ ಎಂದು ಸ್ಪಷ್ಟಣೆ ನೀಡಿದರು.
ಅನರ್ಹ ಶಾಸಕ ಆನಂದ್ ಸಿಂಗ್ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಅವರನ್ನು ನಾವು ನಂಬಿ ಮೋಸ ಹೋಗಿದ್ದೇವೆ. ನಾನು ಎಲ್ಲೂ ಹೋಗುವುದಿಲ್ಲ ಎಂದು ನನ್ನ ಬಳಿ ಹೇಳಿದ್ದರು. ಆದರೆ, ಇದ್ದಕ್ಕಿದ್ದಂತೆ ಬಿಜೆಪಿ ಸೇರಿಕೊಂಡು ತಮ್ಮನ್ನು ತಾವು ಮಾರಿಕೊಂಡಿದ್ದಾರೆಂದು ಸಿದ್ದರಾಮಯ್ಯ ಟೀಕಿಸಿದರು.
‘ಅನರ್ಹರ ಕ್ಷೇತ್ರಗಳಲ್ಲಿ ಜನರು ಆಕ್ರೋಶಗೊಂಡಿದ್ದು, ಈ ಬಾರಿ ಅವರನ್ನು ಸೋಲಿಸಲು ತೀರ್ಮಾನ ಮಾಡಿದ್ದಾರೆ. ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳಲ್ಲಿ ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ. ಬಿಎಸ್‌ವೈ ಸಿಎಂ ಆಗಿದ್ದು ಅನರ್ಹರನ್ನು ಸಮರ್ಥಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ’
-ಸಿದ್ದರಾಮಯ್ಯ, ವಿಪಕ್ಷ ನಾಯಕ







