ಐಎನ್‌ಎಕ್ಸ್ ಮಾಧ್ಯಮ ಪ್ರಕರಣ: ಚಿದಂಬರಂ ಜಾಮೀನು ಅರ್ಜಿ ತೀರ್ಪು ಕಾಯ್ದಿರಿಸಿದ ಸುಪ್ರೀಂ

ಹೊಸದಿಲ್ಲಿ, ನ.28: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಸಲ್ಲಿಸಿದ್ದ ಜಾಮೀನು ಅರ್ಜಿಯ ಕುರಿತ ಆದೇಶವನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ.
ಚಿದಂಬರಂ ಗಂಭೀರ ಸ್ವರೂಪದ ಆರ್ಥಿಕ ಅಪರಾಧ ಎಸಗಿದ್ದು ಇದು ಅರ್ಥವ್ಯವಸ್ಥೆಯ ಮೇಲಷ್ಟೇ ಪರಿಣಾಮ ಬೀರಿಲ್ಲ, ಜನರು ವ್ಯವಸ್ಥೆಯ ಮೇಲಿಟ್ಟಿರುವ ನಂಬಿಕೆಯ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಜಾರಿ ನಿರ್ದೇಶನಾಲಯದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಹೇಳಿದರು. ಈ ಅಕ್ರಮ ವ್ಯವಹಾರದಲ್ಲಿ ಸಂಗ್ರಹವಾದ ಹಣವನ್ನು ಜಮೆ ಮಾಡಿರುವ 12 ಬ್ಯಾಂಕ್ ಖಾತೆಗಳನ್ನು ಗುರುತಿಸಲಾಗಿದೆ ಮತ್ತು ಇತರ ದೇಶಗಳಲ್ಲಿ ಆಸ್ತಿಯನ್ನು ಖರೀದಿಸಲಾಗಿದೆ ಎಂದು ಮೆಹ್ತಾ ಹೇಳಿದರು.
ಚಿದಂಬರಂ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, ಆರ್ಥಿಕ ಅಪರಾಧಗಳ ಫಲಾನುಭವಿಗಳು ಚಿದಂಬರಂ ಅವರ ಕುಟುಂಬದ ಸದಸ್ಯರು ಎಂದು ತನಿಖಾ ಸಂಸ್ಥೆ ತಿಳಿಸಿದೆ. ಚಿದಂಬರಂ ವಿರುದ್ಧ ಯಾವುದೇ ಆರೋಪವನ್ನು ಸಿಬಿಐ ಹೊರಿಸಿಲ್ಲ. ಈ ಪ್ರಕರಣದಲ್ಲಿ ಚಿದಂಬರಂ ನೇರವಾಗಿ ಭಾಗಿಯಾಗಿದ್ದಾರೆ ಎಂಬುದನ್ನು ತೋರಿಸುವ ಒಂದೇ ಒಂದು ಸಾಕ್ಷಿಯೂ ಇಲ್ಲ ಎಂದು ಹೇಳಿದರು.
ಜಾರಿ ನಿರ್ದೇಶನಾಲಯದ ತನಿಖಾ ವರದಿಯನ್ನು ಸೀಲ್ ಮಾಡಿದ ಲಕೋಟೆಯಲ್ಲಿ ಸ್ವೀಕರಿಸುವಂತೆ ನ್ಯಾಯಾಲಯದ ನೋಂದಣಿ ಕಚೇರಿಗೆ ಸೂಚಿಸಿದ ನ್ಯಾಯಪೀಠ, ಜಾಮೀನು ಅರ್ಜಿಯ ಕುರಿತ ಆದೇಶವನ್ನು ಕಾಯ್ದಿರಿಸಿತು.