ಅಮೆರಿಕದ ಖಾಯಂ ವಾಸಕ್ಕಾಗಿ ಎಷ್ಟು ಲಕ್ಷ ಭಾರತೀಯರು ಸರದಿಯಲ್ಲಿದ್ದಾರೆ ಗೊತ್ತಾ ?

ವಾಶಿಂಗ್ಟನ್, ನ. 28: ಅಮೆರಿಕದಲ್ಲಿ ಖಾಯಂ ಆಗಿ ವಾಸ ಮಾಡುವುದಕ್ಕಾಗಿ ನೀಡಲಾಗುವ ಕುಟುಂಬ ಆಧಾರಿತ ಗ್ರೀನ್ ಕಾರ್ಡ್‌ಗಾಗಿ 2.27 ಲಕ್ಷಕ್ಕೂ ಅಧಿಕ ಭಾರತೀಯರು ಕಾಯುತ್ತಿದ್ದಾರೆ ಎಂದು ಇತ್ತೀಚಿನ ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ. ಪ್ರಸಕ್ತ ಕುಟುಂಬ ಆಧಾರಿತ ಗ್ರೀನ್ ಕಾರ್ಡ್‌ಗಳಿಗಾಗಿ ಒಟ್ಟು 40 ಲಕ್ಷ ಮಂದಿ ಸರದಿಯಲ್ಲಿ ಕಾಯುತ್ತಿದ್ದಾರೆ. ಆದರೆ, ವರ್ಷಕ್ಕೆ ಗರಿಷ್ಠ 2.26 ಲಕ್ಷ ಕಾರ್ಡ್‌ಗಳನ್ನಷ್ಟೇ ನೀಡಬಹುದು ಎಂಬ ಮಿತಿಯನ್ನು ಅಮೆರಿಕ ಸಂಸತ್ತು ಕಾಂಗ್ರೆಸ್ ವಿಧಿಸಿದೆ.
ದೇಶವಾರು ಪಟ್ಟಿಯ ಪ್ರಕಾರ, ಅತ್ಯಧಿಕ ಸಂಖ್ಯೆಯ ಗ್ರೀನ್ ಕಾರ್ಡ್ ಆಕಾಂಕ್ಷಿಗಳು ಅಮೆರಿಕದ ನೆರೆಯ ಮೆಕ್ಸಿಕೊ ದೇಶದವರಾಗಿದ್ದಾರೆ. ಅಲ್ಲಿನ 15 ಲಕ್ಷ ಮಂದಿ ಸರದಿಯಲ್ಲಿದ್ದಾರೆ. 2.27 ಲಕ್ಷ ಆಕಾಂಕ್ಷಿಗಳೊಂದಿಗೆ ಎರಡನೇ ಸ್ಥಾನದಲ್ಲಿರುವುದು ಭಾರತ ಮತ್ತು 1.80 ಲಕ್ಷ ಆಕಾಂಕ್ಷಿಗಳೊಂದಿಗೆ ಚೀನಾ ಮೂರನೇ ಸ್ಥಾನದಲ್ಲಿದೆ.
ಕುಟುಂಬ ಆಧಾರಿತ ಗ್ರೀನ್ ಕಾರ್ಡ್ ಆಕಾಂಕ್ಷಿಗಳ ಪಟ್ಟಿಯಲ್ಲಿರುವ ಹೆಚ್ಚಿನವರು ಅಮೆರಿಕದ ಪ್ರಜೆಗಳ ಸಹೋದರ-ಸಹೋದರಿಯರಾಗಿದ್ದಾರೆ. ಅಮೆರಿಕದ ಪ್ರಸಕ್ತ ಕಾನೂನಿನ ಪ್ರಕಾರ, ಅಮೆರಿಕದ ಪ್ರಜೆಗಳು ತಮ್ಮ ಕುಟುಂಬ ಸದಸ್ಯರು ಮತ್ತು ರಕ್ತ ಸಂಬಂಧಿಗಳನ್ನು ಗ್ರೀನ್ ಕಾರ್ಡ್‌ಗಾಗಿ ಪ್ರಾಯೋಜಿಸಬಹುದು.





