ಐಟಿ ಇಲಾಖೆ ಮುಂದೆ 'ಕೈ-ದಳ' ಧರಣಿ: ತಿಂಗಳೊಳಗೆ ದೋಷಾರೋಪಣೆ ಪಟ್ಟಿ ಸಲ್ಲಿಸಲು ಕೋರ್ಟ್ ಆದೇಶ

ಫೈಲ್ ಚಿತ್ರ
ಬೆಂಗಳೂರು, ನ.28: ಜೆಡಿಎಸ್, ಕಾಂಗ್ರೆಸ್ ಶಾಸಕರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಖಂಡಿಸಿ ಮಾಜಿ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಐಟಿ ಕಚೇರಿ ಮುಂಭಾಗ ನಡೆದಿದ್ದ ಪ್ರತಿಭಟನಾ ಧರಣಿ ವಿಚಾರಕ್ಕೆ ಸಂಬಂಧಿಸಿದಂತೆ ಮುಂದಿನ ತಿಂಗಳೊಳಗೆ ದೋಷಾರೋಪಣೆ ಪಟ್ಟಿ ಸಲ್ಲಿಸಲು ಜನಪ್ರತಿನಿಧಿಗಳ ಕೋರ್ಟ್ ಪೊಲೀಸರಿಗೆ ಆದೇಶಿಸಿದೆ.
ಈ ಕುರಿತು ಬಿ.ಮಲ್ಲಿಕಾರ್ಜುನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ಕೋರ್ಟ್ನಲ್ಲಿ ನಡೆಯಿತು. ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರಕಾರವಿದ್ದಾಗ ಐಟಿ ಕಚೇರಿ ಮುಂಭಾಗ ಧರಣಿ ನಡೆಸಿದ ಜನಪ್ರತಿನಿಧಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಒಂದು ತಿಂಗಳೊಳಗೆ ದೋಷಾರೋಪಣೆ ಪಟ್ಟಿ ಸಲ್ಲಿಸಬೇಕೆಂದು ನ್ಯಾಯಪೀಠವು ಪೊಲೀಸರಿಗೆ ಆದೇಶಿಸಿತು.
ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ, ಡಾ.ಜಿ.ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡುರಾವ್, ಡಿಕೆಶಿ, ಸಾ.ರಾ.ಮಹೇಶ್, ಡಿಸಿ ತಮ್ಮಣ್ಣ, ಮುನಿರತ್ನ ನಾಯ್ಡು ವಿರುದ್ಧ ಎಫ್ಐಆರ್ ದಾಖಲಾಗಿದೆ. ಜನ ಸಾಮಾನ್ಯರ ವಿರುದ್ಧ ಪ್ರಕರಣ ದಾಖಲಾದರೆ ಒಂದು ತಿಂಗಳಲ್ಲಿ ದೋಷರೋಪಣೆ ಪಟ್ಟಿ ಸಲ್ಲಿಸುತ್ತೀರಿ. ಆದರೆ, ಜನಪ್ರತಿನಿಧಿಗಳ ವಿರುದ್ಧ ಯಾಕೆ ಆರು ತಿಂಗಳು ಬೇಕಾಗುತ್ತದೆ ಎಂದು ಪ್ರಶ್ನಿಸಿದ ನ್ಯಾಯಪೀಠವು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.







