ಶಿರ್ವ ಫಾ.ಮಹೇಶ್ ಡಿಸೋಜ ಸಾವಿನ ಪ್ರಕರಣ : ತನಿಖೆ ಚುರುಕು: 50ಕ್ಕೂ ಅಧಿಕ ಮಂದಿಯ ವಿಚಾರಣೆ
ಶಿರ್ವ, ನ.28: ಶಿರ್ವ ಚರ್ಚಿನ ಸಹಾಯಕ ಧರ್ಮಗುರು ಹಾಗೂ ಶಿರ್ವ ಡೋನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ.ಮಹೇಶ್ ಡಿಸೋಜ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಸಂಬಂಧ ಈವರೆಗೆ 50ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿಯನ್ನು ಕಲೆ ಹಾಕಲಾಗಿದೆ.
ಅ.11ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಫಾ.ಮಹೇಶ್ ಡಿಸೋಜ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಚರ್ಚ್‌ನ ಭಕ್ತರು ಹಾಗೂ ಸಾರ್ವಜನಿಕರು ನ.2ರಿಂದ ಶಿರ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಅವರನ್ನು ಈ ಪ್ರಕರಣದ ತನಿಖಾಧಿಕಾರಿಯಾಗಿ ನೇಮಕ ಮಾಡಿ ತನಿಖೆ ಚುರುಕುಗೊಳಿಸಲಾಗಿತ್ತು.
ಮರಣೋತ್ತರ ಪರೀಕ್ಷೆಯಲ್ಲಿ ಸಂಗ್ರಹಿಸಿದ ದೇಹದ ಅಂಗಾಗಗಳ ಪರೀಕ್ಷೆ ವರದಿಯನ್ನು ಮಂಗಳೂರಿನ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯ ಈಗಾಗಲೇ ನೀಡಿದ್ದು, ಅದನ್ನು ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲದ ವೈದ್ಯರಿಗೆ ಸಲ್ಲಿಸಲಾಗಿದೆ. ಇದನ್ನು ಪರಿಶೀಲಿಸಿ ಅವರು ಅಂತಿಮ ವರದಿಯನ್ನು ನೀಡಬೇಕಾಗಿದೆ ಎಂದು ತನಿಖಾಧಿಕಾರಿ ಮಹೇಶ್ ಪ್ರಸಾದ್ ತಿಳಿಸಿದರು.
ಅದೇ ರೀತಿ ವಶಪಡಿಸಿಕೊಳ್ಳಲಾದ ಫಾದರ್ ಅವರ ಎರಡು ಮೊಬೈಲ್ ಗಳ ಡೇಟಾ ಪರಿಶೀಲನೆಗಾಗಿ ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇದರ ವರದಿಯು ಒಂದು ವಾರದಲ್ಲಿ ಬರುವ ನಿರೀಕ್ಷೆ ಇದೆ. ಈ ಮಧ್ಯೆ ಪ್ರಕರಣದ ತನಿಖೆ ಮುಂದುವರೆದಿದ್ದು, ಸಂಶಯಾಸ್ಪದ ಪ್ರಕರಣದ ಹಿನ್ನೆಲೆಯಲ್ಲಿ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ಹೇಳಿದರು.







