ತುಮಕೂರು ಸ್ಮಾರ್ಟ್ ಸಿಟಿ-ಡೆನ್ಮಾಕ್‌ನ ಆಲ್‌ಬೋರ್ಗ್ ಸ್ಮಾಟ್ ಸಿಟಿ ನಡುವೆ ಒಡಂಬಡಿಕೆಗೆ ಸಹಿ

ಬೆಂಗಳೂರು, ನ. 28: ತುಮಕೂರು ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ‘ತುಮಕೂರು ಸ್ಮಾರ್ಟ್‌ಸಿಟಿ ಮತ್ತು ಡೆನ್ಮಾಕ್ ದೇಶದ ಆಲ್‌ಬೋರ್ಗ್ ಸ್ಮಾರ್ಟ್‌ಸಿಟಿ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಯಿತು.
ಗುರುವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ಹಾಗೂ ತುಮಕೂರು ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಉಪಸ್ಥಿತಿಯಲ್ಲಿ ಡೆನ್ಮಾಕ್‌ನ ರಾಯಭಾರಿ ಫ್ರೆಡ್ಡಿ ಸ್ವಾನೆ ಹಾಗೂ ತುಮಕೂರು ಸ್ಮಾರ್ಟ್‌ಸಿಟಿ ಕಂಪೆನಿ ಮುಖ್ಯಸ್ಥೆ ಶಾಲಿನಿ ರಜನೀಶ್ ಒಪ್ಪಂದಕ್ಕೆ ಸಹಿ ಹಾಕಿದರು.
ನಗರ ನೀರು ನಿರ್ವಹಣೆ, ಸಾರಿಗೆ, ತ್ಯಾಜ್ಯ ವಿಲೇವಾರಿ, ಗುಣಮಟ್ಟದ ಶಿಕ್ಷಣ- ಆರೋಗ್ಯ ಸೌಲಭ್ಯ ಕಲ್ಪಿಸುವ ಕುರಿತು ಉಭಯ ನಗರಗಳು ಜಂಟಿಯಾಗಿ ಯೋಜನೆ ರೂಪಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಪರಸ್ಪರ ಸಹಕಾರಕ್ಕೆ ಒಡಂಬಡಿಕೆ ಸಹಕಾರಿಯಾಗಲಿದೆ ಎಂದು ತಿಳಿಸಲಾಗಿದೆ.
ಬಾಂಧವ್ಯ ವೃದ್ಧಿ: ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡುವಲ್ಲಿ ತುಮಕೂರು ನಗರದ ಸಮಗ್ರ ಬೆಳವಣಿಗೆ ಅನಿವಾರ್ಯ. ಆ ನಿಟ್ಟಿನಲ್ಲಿ ಈ ಒಡಂಬಡಿಕೆ ಸಹಕಾರಿಯಾಲಿದೆ. ಜೊತೆಗೆ ಒಪ್ಪಂದದಿಂದ ಎರಡು ನಗರಗಳ ನಡುವೆ ಬಾಂಧವ್ಯ ವೃದ್ಧಿಸಲಿದೆ ಎಂದು ಸಚಿವ ಮಾಧುಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ಕೇಂದ್ರದ ನೆರವಿನಿಂದ ಈಗಾಗಲೇ ತುಮಕೂರು ನಗರದ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ. ಇದೀಗ ಡೆನ್ಮಾಕ್‌ನ ಸಹಕಾರವೂ ಸಿಗುವುದರಿಂದ ತುಮಕೂರು ಹಲವು ಕ್ಷೇತ್ರಗಳಲ್ಲಿ ಅಭಿವೃದ್ದಿಯಾಗಿ ಜನರ ಬದುಕು ಉತ್ತಮಗೊಳ್ಳಲಿದೆ ಎಂದು ಮಾಧುಸ್ವಾಮಿ ನುಡಿದರು.
ಸವಾಲು ಎದುರಿಸಲು ಪೂರಕ: ‘ಮುಂದಿನ ಜನಾಂಗ ಸುಗಮ ಜೀವನ ನಡೆಸಲು ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಸ್ಮಾರ್ಟ್‌ಸಿಟಿ ಯೋಜನೆ ಪೂರಕವಾಗಿದ್ದು, ಉಭಯ ನಗರಗಳ ನಡುವಿನ ಬೆಳವಣಿಗೆ ಅಭಿವೃದ್ಧಿಗೆ ಪೂರಕ ಆಗಲಿದೆ ಎಂದು ಡೆನ್ಮಾರ್ಕ್ ರಾಯಭಾರಿ ಫ್ರೆಡ್ಡಿ ಸ್ವಾನೆ ತಿಳಿಸಿದರು.
ಸ್ಮಾಟ್ ವ್ಯವಸ್ಥೆ: ತುಮಕೂರು ಸ್ಮಾರ್ಟ್ ಸಿಟಿ ಲಿ.ಮತ್ತು ಆಲ್‌ಬೋರ್ಗ್ ನಗರಗಳ ಅಭಿವೃದ್ಧಿಗೆ ಆರ್ಥಿಕ ಸಹಾಯದ ಮೂಲಗಳನ್ನು ಗುರುತಿಸುವುದರ ಜೊತೆಗೆ ಸ್ಮಾರ್ಟ್ ಶಿಕ್ಷಣ ವ್ಯವಸ್ಥೆಗೆ ಸರಕಾರಿ ಶಾಲಾ-ಕಾಲೇಜುಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಂ, ಡಿಜಿಟಲ್ ಗ್ರಂಥಾಲಯ ಸ್ಥಾಪನೆ.
ನಗರ ಸಾರಿಗೆ ವ್ಯವಸ್ಥೆ, ದಿನದ 24 ಗಂಟೆಗಳ ಕಾಲ ನೀರು ಪೂರೈಕೆ, ಕೆರೆಗಳ ನಡುವೆ ಸಂಪರ್ಕ ಹಾಗೂ ಪುನರುಜ್ಜೀವನ, ಉದ್ಯಾನವನಗಳ ಅಭಿವೃದ್ಧಿ, ಸೌರಶಕ್ತಿ ಬಳಕೆ, ತ್ಯಾಜ್ಯ ವಿಲೇವಾರಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಉಭಯ ನಗರಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.
‘ತುಮಕೂರು ನಗರದ ಅಭಿವೃದ್ಧಿ ದೃಷ್ಟಿಯಿಂದ ಜ್ಞಾನದ ವಿನಿಮಯ, ಅಧ್ಯಯನ ಪ್ರವಾಸ, ಸ್ಮಾರ್ಟ್‌ಸಿಟಿ ಯೋಜನೆಗಳನ್ನು ರೂಪಿಸಲು ಪರಸ್ಪರ ನೆರವು, ಸಂಪನ್ಮೂಲ ಕ್ರೋಡೀಕರಣಕ್ಕೆ ಆದ್ಯತೆ ನೀಡಲಿದ್ದು, ಈ ಒಪ್ಪಂದ ಎರಡೂ ನಗರಗಳ ಅಭಿವೃದ್ಧಿಗೆ ಪೂರಕವಾಗಲಿದೆ’
-ಶಾಲಿನಿ ರಜನೀಶ್, ತುಮಕೂರು ಸ್ಮಾರ್ಟ್ ಸಿಟಿ ಮುಖ್ಯಸ್ಥೆ







