ಡಿ.21ಕ್ಕೆ ಸೌಹಾರ್ದ ಸಹಕಾರಿಗಳ ಕ್ರೀಡೋತ್ಸವ
ಉಡುಪಿ, ನ.28: ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಉಡುಪಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಡಿ.21ರಂದು ರಾಜ್ಯದಲ್ಲೇ ಪ್ರಥಮ ಬಾರಿಗೆ ಉಡುಪಿ ಜಿಲ್ಲಾ ಮಟ್ಟದ ಸೌಹಾರ್ದ ಸಹಕಾರಿಗಳ ಕ್ರೀಡೋತ್ಸವ ‘ಸೌಹಾರ್ದ ಸ್ಪೂರ್ತಿ-2019’ನ್ನು ನಡೆಸಲು ತೀರ್ಮಾನಿಸಲಾಗಿದೆ.
ಈ ಕ್ರೀಡಾಕೂಟ ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆ ಚೇತನಾ ಹೈಸ್ಕೂಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಜಿಲ್ಲೆಯ 3000ಕ್ಕೂ ಅಧಿಕ ಸಹಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ರೀಡೋತ್ಸವದ ಆಕರ್ಷಣೆಯನ್ನು ಹೆಚ್ಚಿಸಲು ಜಿಲ್ಲೆಯ 7 ತಾಲೂಕುಗಳನ್ನು 7 ವಲಯಗಳನ್ನಾಗಿ ರಚಿಸಿ, ಸಹಕಾರಿಯ 7 ಬಣ್ಣಗಳ ಸಮವಸ್ತ್ರ ಧರಿಸಿ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ, ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಜಿಲ್ಲೆಯ ಎಲ್ಲಾ ಶಾಸಕರು, ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇದರ ಅಧ್ಯಕ್ಷ ಬಿ.ಹೆಚ್ ಕೃಷ್ಣಾ ರೆಡ್ಡಿ, ಪ್ರಧಾನ ವ್ಯವಸ್ಥಾಪಕ ಶರಣ ಗೌಡ ಜಿ. ಪಾಟೀಲ ಹಾಗೂ ಇತರ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.







