ಇವಿಎಂ ವಿರೋಧಿಸಿ 3000 ಕಿ.ಮೀ. ದೂರ ಕ್ರಮಿಸಿ ರಾಜ್ಯ ರಾಜಧಾನಿಗೆ ಬಂದರು 'ದಿಲ್ಹಾನ್'

ಬೆಂಗಳೂರು, ನ.28: ಇವಿಎಂ ಹಠಾವೋ, ದೇಶ್ ಬಚಾವೋ ಅಭಿಯಾನದ ರೂವಾರಿ ಹಾಗೂ ಸಾಮಾಜಿಕ ಕಾರ್ಯಕರ್ತ ಓಂಕಾರ್ ಸಿಂಗ್ ದಿಲ್ಹಾನ್ ಗುರುವಾರ ಬೆಂಗಳೂರಿಗೆ ಆಗಮಿಸಿದರು. ಈ ವೇಳೆ ಅವರನ್ನು ನಗರದ ಸಾಮಾಜಿಕ ಕಾರ್ಯಕರ್ತರು, ಎನ್‌ಜಿಒಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಇವಿಎಂ ವಿರೋಧಿ ಸಂಘಟನೆಗಳ ಸದಸ್ಯರು ಬರಮಾಡಿಕೊಂಡರು.
ನಂತರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಓಂಕಾರ್ ಸಿಂಗ್, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಸರಿ ಹೊಂದುವುದಿಲ್ಲ. ಶ್ರೀಮಂತ ಹಾಗೂ ಮುಂದುವರಿದ ರಾಷ್ಟ್ರಗಳೇ ಈಗ ಇವಿಎಂ ಕೈಬಿಟ್ಟು ಹಳೆಯ ಪದ್ಧತಿಗೆ ಮರಳಿವೆ. ಆದ್ದರಿಂದ ಭಾರತದಲ್ಲಿ ಇವಿಎಂ ಕೈಬಿಡಬೇಕು ಎಂದು ಚುನಾವಣಾ ಆಯೋಗವನ್ನು ಅವರು ಒತ್ತಾಯಿಸಿದರು.
ಈ ಹಿಂದೆ ಬ್ಯಾಲೆಟ್ ವೋಟಿಂಗ್ ವ್ಯವಸ್ಥೆ ದೇಶದಲ್ಲಿ ಜಾರಿಯಲ್ಲಿತ್ತು. ಆಗ ಜನರಿಗೆ ಯಾವುದೇ ಸಂಶಯವಿರುತ್ತಿರಲಿಲ್ಲ. ಅದರಲ್ಲಿ ಅಕ್ರಮವೆಸಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇವಿಎಂನಲ್ಲಿ ಅಕ್ರಮವೆಸಗಲು ಸಾಧ್ಯವಿದೆ ಎಂಬುದು ಹಲವು ತಜ್ಞರ ಅಭಿಪ್ರಾಯವಾಗಿದೆ. ಆದ್ದರಿಂದ ಜನರ ಸಂಶಯ ನಿವಾರಣೆಗಾಗಿ ಹಳೆಯ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.
ಮೋದಿ ನೇತೃತ್ವದ ಎನ್‌ಡಿಎ ಸರಕಾರದಲ್ಲಿ ಯಾವುದೇ ಜನಪರ ಕೆಲಸಗಳು ಆಗದೇ ಇದ್ದರೂ ಸಹ ಇವಿಎಂ ದುರ್ಬಳಕೆಯಿಂದ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು, ಅಧಿಕಾರಕ್ಕೆ ಬರುವಂತೆ ಆಯಿತು. ವಿದ್ಯುನ್ಮಾನ ಮತಯಂತ್ರ ಬೇಡವೆಂದು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ, ಸುಬ್ರಮಣಿಯನ್ ಸ್ವಾಮಿ ಅವರೇ ಆಕ್ಷೇಪ ಎತ್ತಿದ್ದರು. ಆದರೆ ಈಗ ಈ ಬಗ್ಗೆ ಮೌನ ವಹಿಸಿದ್ದಾರೆ ಎಂದು ಅವರು ದೂರಿದರು.
ಇವಿಎಂ ಅನ್ನು ಸಂಶಯದೊಂದಿಗೆ ನೋಡಿರುವುದು ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿಯ ನಾಯಕತ್ವವೂ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿದೆ. ಮೊದಲು ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿದ ವ್ಯಕ್ತಿಯೆಂದರೆ ಎಲ್.ಕೆ.ಆಡ್ವಾಣಿಯವರು. ಇವಿಎಂ ಲೋಪದ ಬಗ್ಗೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಜಿ.ವಿ.ಎಲ್. ನರಸಿಂಹರಾವ್ ಪುಸ್ತಕವನ್ನೇ ಬರೆದಿದ್ದಾರೆ. ಯಾವುದೇ ಪಕ್ಷವಾಗಲೀ, ಇವಿಎಂಗಳಲ್ಲಿ ಪ್ರಜಾಪ್ರಭುತ್ವದ ನಂಬಿಕೆಯನ್ನು ಉಳಿಸಿಕೊಳ್ಳುವುದು ಚುನಾವಣಾ ಆಯೋಗದ ಕರ್ತವ್ಯವಾಗಿದೆ.
- ಓಂಕಾರ್ ಸಿಂಗ್ ದಿಲ್ಹಾನ್, ಸಾಮಾಜಿಕ ಕಾರ್ಯಕರ್ತ
6,500 ಕಿ.ಮೀ. ಪಾದಯಾತ್ರೆ...
ಇವಿಎಂ ಹಠಾವೋ, ದೇಶ್ ಬಚಾವೋ ಎಂಬ ಆಗ್ರಹದೊಂದಿಗೆ ಸುಮಾರು 6500 ಕಿ.ಮೀ. ಪಾದಯಾತ್ರೆ ಹಮ್ಮಿಕೊಂಡಿರುವ ಸಾಮಾಜಿಕ ಕಾರ್ಯಕರ್ತ ಓಂಕಾರ್ ಸಿಂಗ್ ದಿಲ್ಹಾನ್ ಅವರು, ಈಗಾಗಲೇ 100 ದಿನಗಳನ್ನು ಪೂರೈಸಿ 3 ಸಾವಿರ ಕಿ.ಮೀ. ದೂರ ಕ್ರಮಿಸಿ ಜನರಲ್ಲಿ ಇವಿಎಂ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ಆ.18ರಂದು ಉತ್ತರಾಖಂಡ್ ರಾಜ್ಯದ ರುದ್ರಪುರದಿಂದ ಪಾದಯಾತ್ರೆ ಆರಂಭಿಸಿರುವ ಅವರು, ಈಗಾಗಲೇ ಉತ್ತರಾಖಂಡ್, ದೆಹಲಿ, ಉತ್ತರ ಪ್ರದೇಶ, ಗುಜರಾತ್, ರಾಜಸ್ತಾನ, ಮಹಾರಾಷ್ಟ್ರ ರಾಜ್ಯಗಳಲ್ಲಿ ಕ್ರಮಿಸಿ, ಬೆಂಗಳೂರಿಗೆ ಆಗಮಿಸಿದ್ದಾರೆ. ನಂತರ ಇಲ್ಲಿಂದ ತಮಿಳುನಾಡು, ಆಂಧ್ರಪ್ರದೇಶ, ಒಡಿಸ್ಸಾ, ಅಸ್ಸಾಂ, ಪಶ್ಚಿಮಬಂಗಾಳ, ಬಿಹಾರ, ಉತ್ತರಾಖಂಡ್ ಮೂಲಕ ದೆಹಲಿಗೆ ತೆರಳಿ ಅಲ್ಲಿ ತಮ್ಮ ಪಾದಯಾತ್ರೆ ಮುಕ್ತಾಯಗೊಳಿಸಲಿದ್ದಾರೆ.







