ಅಜಿತ್ ಪವಾರ್ ಮತ್ತೆ ಡಿಸಿಎಂ ?

ಮುಂಬೈ, ನ.28: ಎನ್‌ಸಿಪಿಯ ಮುಖಂಡ ಅಜಿತ್ ಪವಾರ್ ಮತ್ತೊಮ್ಮೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕಳೆದ ಶನಿವಾರ ಬಿಜೆಪಿಯ ಜತೆ ಕೈಜೋಡಿಸಿ ನಾಟಕೀಯ ವಿದ್ಯಮಾನದಲ್ಲಿ ರಾಜ್ಯದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಅಜಿತ್ ಪವಾರ್, ಮಂಗಳವಾರ ಹುದ್ದೆಗೆ ರಾಜೀನಾಮೆ ನೀಡಿ ಎನ್‌ಸಿಪಿಗೆ ಮರಳಿದ್ದರು.
ಇದೀಗ ಗುರುವಾರ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಸರಕಾರದ ಮುಖ್ಯಮಂತ್ರಿಯಾಗಿ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪ್ರಮಾಣವಚನ ಕಾರ್ಯಕ್ರಮದಲ್ಲಿ ಅಜಿತ್ ಪವಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರೂ ಪ್ರಮಾಣ ವಚನ ಸ್ವೀಕರಿಸಲಿಲ್ಲ. ತನಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಇದನ್ನು ಪಕ್ಷ ನಿರ್ಧರಿಸಲಿದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಆದರೆ ಉಪಮುಖ್ಯಮಂತ್ರಿ ಪಟ್ಟಕ್ಕಾಗಿ ಅಜಿತ್ ಪವಾರ್ ಹಾಗೂ ಎನ್‌ಸಿಪಿಯ ಮತ್ತೊಬ್ಬ ಪ್ರಭಾವಿ ಮುಖಂಡ ಜಯಂತ್ ಪಾಟಿಲ್ ಮಧ್ಯೆ ತೀವ್ರ ಪೈಪೋಟಿಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಫಡ್ನವೀಸ್ ಜೊತೆ ಕೈಜೋಡಿಸಿದ ಬಳಿಕ ಅಜಿತ್ ಪವಾರ್‌ರನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ವಜಾಗೊಳಿಸಿ ಜಯಂತ್ ಪಾಟೀಲರನ್ನು ನೇಮಿಸಲಾಗಿತ್ತು.
ಒಂದುವೇಳೆ ಅಜಿತ್ ಪವಾರ್‌ಗೆ ಉಪಮುಖ್ಯಮಂತ್ರಿ ಸ್ಥಾನ ದೊರೆತರೆ, ಐದು ದಿನದೊಳಗೆ ವಿಭಿನ್ನ ಮೈತ್ರಿಕೂಟದಲ್ಲಿ ಎರಡು ಬಾರಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ವಿಶಿಷ್ಟ ದಾಖಲೆ ಬರೆಯಲಿದ್ದಾರೆ 60 ವರ್ಷದ ‘ಅಜಿತ್ ದಾದ’.







