ಬೆಂಗಳೂರಿನ 22 ಸಾವಿರ ಅಂಗಡಿ ಮಾಲಕರಿಗೆ ನೋಟಿಸ್!: ಕಾರಣ ಏನು ಗೊತ್ತೇ ?

ಬೆಂಗಳೂರು, ನ.28: ಬಿಬಿಎಂಪಿ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಹಾಕದ ಸುಮಾರು 22 ಸಾವಿರ ವರ್ತಕರಿಗೆ ನೋಟಿಸ್ ಕೊಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ಬಿಬಿಎಂಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕುವಂತೆ ಬಿಬಿಎಂಪಿಯಿಂದ ಲೈಸನ್ಸ್ ಪಡೆದಿರುವ 47,406 ವರ್ತಕರಿಗೆ ತಿಳಿಸಿದ್ದು, ಅದರಲ್ಲಿ ಕನ್ನಡ ನಾಮಪಲಕ ಹಾಕದ 22,474 ಅಂಗಡಿ ಮಾಲಕರಿಗೆ ಈಗಾಗಲೇ ನೋಟಿಸ್ ನೀಡಿದ್ದೇವೆ. ಈಗ 8,195 ಅಂಗಡಿಗಳಲ್ಲಿ ಕನ್ನಡ ನಾಮಫಲಕ ಅಳವಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳಲ್ಲಿ ಕೇವಲ 47,406 ಅಂಗಡಿಗಳ ಮಾಲಕರು ಅಧಿಕೃತವಾಗಿ ಬಿಬಿಎಂಪಿಯಿಂದ ಟ್ರೇಡ್ ಲೈಸನ್ಸ್ ಪಡೆದುಕೊಂಡಿದ್ದಾರೆ. ರೆಸಿಡೆನ್ಸಿಯಲ್ ಏರಿಯಾಗಳಲ್ಲಿರುವ ಹೊಟೇಲ್‌ಗಳು, ಕೇಕ್ ಶಾಪ್‌ಗಳು ಹಾಗೂ ಅಂಗಡಿಗಳಿಗೆ ಕಮರ್ಷಿಯಲ್ ಟ್ರೇಡ್ ಲೈಸನ್ಸ್ ಕೊಡಬೇಕಾಗಿದೆ. ರೆಸಿಡೆನ್ಸಿಯಲ್ ಏರಿಯಾಗಳಲ್ಲಿ ವ್ಯಾಪಾರ ಮಾಡುತ್ತಿರುವ ವರ್ತಕರು ಬಿಬಿಎಂಪಿಯಿಂದ ಲೈಸನ್ಸ್ ಪಡೆಯದೆ ಇರುವುದರಿಂದ ಪಾಲಿಕೆಗೆ ತುಂಬಾ ನಷ್ಟವಾಗುತ್ತಿದೆ ಎಂದು ಅವರು ತಿಳಿಸಿದರು.







