ಪೊಲೀಸ್ ಅಧಿಕಾರಿಗಳಿಗೆ ವಿದೇಶಿ ಪ್ರಕರಣಗಳ ಕುರಿತು ಅರಿವು ಅಗತ್ಯ: ನೀಲಮಣಿ ರಾಜು

ಬೆಂಗಳೂರು, ನ.28: ರಾಜ್ಯ ಪೊಲೀಸ್ ಅಧಿಕಾರಿಗಳು ವಿದೇಶದಲ್ಲಿ ಪ್ರಕರಣಗಳ ತನಿಖೆ ಮತ್ತು ಹಸ್ತಾಂತರ ಪ್ರಕ್ರಿಯೆಯ ಕುರಿತು ಹೆಚ್ಚಿನ ಅರಿವು ಪಡೆಯುವುದು ಅಗತ್ಯವಿದೆ ಎಂದು ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ತಿಳಿಸಿದರು.
ಸಿಐಡಿ ವತಿಯಿಂದ ನಗರದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವಿದೇಶಿ ಪ್ರಕರಣಗಳ ತನಿಖೆ ಕುರಿತು ಪೊಲೀಸ್ ಅಧಿಕಾರಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸೈಬರ್ ಮತ್ತು ಆರ್ಥಿಕ ಅಪರಾಧಗಳ ಆರೋಪಿಗಳು ವಿದೇಶಗಳಲ್ಲಿ ಅವಿತುಕೊಂಡಿದ್ದಾರೆ. ಇವರನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸುವ ನಿಟ್ಟಿನಲ್ಲಿ ಮಾಹಿತಿ ಹಾಗೂ ಅರಿವನ್ನು ಪಡೆಯಬೇಕಾಗಿದೆ ಎಂದರು.
ಸಿಐಡಿಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸೈಬರ್ ಅಪರಾಧಗಳು, ಆರ್ಥಿಕ ಅಪರಾಧಗಳು ಹೆಚ್ಚಾಗಿವೆ. ಈ ಪ್ರಕರಣಗಳ ಆರೋಪಿಗಳು ವಿದೇಶಗಳಲ್ಲಿ ನೆಲೆಸಿರುತ್ತಾರೆ. ಈ ಆರೋಪಿಗಳ ಕುರಿತು ಯಾವ ರೀತಿಯಲ್ಲಿ ಮಾಹಿತಿ ಪಡೆದುಕೊಳ್ಳಬೇಕೆಂದು ಇಲಾಖೆಯ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ಕಾರ್ಯಾಗಾರವನ್ನು ಆಯೋಜಿಸಿದ್ದೇವೆಂದು ಮಾಹಿತಿ ನೀಡಿದರು.
ಆರ್ಥಿಕ ಅಪರಾಧ ವಿಭಾಗದ ಪೊಲೀಸ್ ಮಹಾನಿರ್ದೇಶಕ ದಯಾನಂದ ಮತನಾಡಿದರು. ಸಿಬಿಐ ಸಹಾಯಕ ನಿರ್ದೇಶಕ ಅನುಝ್ ಅರ್ಯ, ರಾಜ್ಯ ಪೊಲೀ್ ಅಧಿಕಾರಿಗಳಿಗೆ ತರಬೇತಿ ನೀಡಿದರು.







