ದಲಿತರು ಕಾಂಗ್ರೆಸ್ ತಿರಸ್ಕರಿಸಬೇಕು: ಡಿಸಿಎಂ ಗೋವಿಂದ ಕಾರಜೋಳ

ಮಂಡ್ಯ, ನ.28: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿ ದಲಿತರನ್ನು ಮತ ಬ್ಯಾಂಕನ್ನಾಗಿ ಇಟ್ಟುಕೊಂಡು ಶೋಷಣೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ದಲಿತರು ತಿರಸ್ಕರಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮನವಿ ಮಾಡಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರ ಏರ್ಪಡಿಸಿದ್ದ ತಾಲೂಕಿನ ಪರಿಶಿಷ್ಠ ಸಮುದಾಯದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರವು ರಚನೆಯಾಗಲು ನಾರಾಯಣಗೌಡ ಶಾಸಕ ಸ್ಥಾನ ತ್ಯಾಗ ಮಾಡಿದ್ದಾರೆ. ಅವರ ತ್ಯಾಗದ ಫಲವಾಗಿ ದಲಿತ ವರ್ಗಗಳಿಗೆ ಸೇರಿದ ನಾನು ನಾಡಿನ ಉಪಮುಖ್ಯಮಂತ್ರಿಯಾಗಿದ್ದೇನೆ. ಹಾಗಾಗಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಯಡಿಯೂರಪ್ಪ ಕೈಬಲಪಡಿಸಬೇಕು ಎಂದು ಅವರು ಹೇಳಿದರು.
ಬಿಜೆಪಿ ಪಕ್ಷದ ಅಭ್ಯರ್ಥಿ ನಾರಾಯಣಗೌಡ ಮಾತನಾಡಿ, ತಾಲೂಕಿನ ಅಭಿವೃದ್ಧಿಗೆ ಹಾಗೂ ಜನತೆಯ ನೆಮ್ಮದಿಯ ಜೀವನಕ್ಕೆ ಬಿಜೆಪಿಯನ್ನು ಈ ಬಾರಿ ಗೆಲ್ಲಿಸಿ ಹರಸಿ ಆಶೀರ್ವದಿಸಿ ಎಂದು ತಲೆಬಾಗಿ ನಮಿಸಿ ಮತಯಾಚನೆ ಮಾಡಿದರು.
ಮಾಜಿ ಸಚಿವ ಬಿ.ಸೋಮಶೇಖರ್, ಸಂಸದ ನಾರಾಯಣಸ್ವಾಮಿ, ಶಾಸಕ ಮೂಡಿಗೆರೆ ಕುಮಾರಸ್ವಾಮಿ, ಮಾಜಿ ಶಾಸಕ ಡಿ.ಎಸ್.ವೀರಯ್ಯ, ತೇಜಸ್ವಿನಿಗೌಡ, ಈ ಅಶ್ವತ್ಥನಾರಾಯಣ, ಕೆ.ಶಿವರಾಂ, ಇತರ ಮುಖಂಡರು ಉಪಸ್ಥಿತರಿದ್ದರು.