ಬೈಕಂಪಾಡಿ ಪ್ರದೇಶದ ಸಮಗ್ರ ಸಮೀಕ್ಷೆ : ಕೈಗಾರಿಕಾ ಸ್ಪಂದನ ಕಾರ್ಯಕ್ರಮದಲ್ಲಿ ಡಿಸಿ ಸೂಚನೆ

ಮಂಗಳೂರು, ನ.28: ಬೈಕಂಪಾಡಿ ಕೈಗಾರಿಕಾ ಪ್ರದೇಶಗಳಲ್ಲಿ ಆಗಾಗ್ಗೆ ನೆರೆ ಬರುವ ಕಾರಣ ಕೈಗಾರಿಕಾ ಘಟಕಗಳಿಗೆ ನಷ್ಟವಾಗುವ ದೃಷ್ಟಿಯಿಂದ ಆ ನೆರೆ ಪ್ರದೇಶಗಳ ಕುರಿತು ಸಮೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಸಭಾಂಗಣದ ಹಾಲ್‌ನಲ್ಲಿ ಗುರುವಾರ ನಡೆದ ಕೈಗಾರಿಕಾ ಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.
ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ, ನೀರು ಹರಿಯುವ ಚರಂಡಿಗಳನ್ನು ಮರು ವಿನ್ಯಾಸಗೊಳಿಸುವ ಸೂಕ್ತ ಪ್ರಸ್ತಾವನೆ ತಯಾರಿಸಬೇಕು. ಈ ಪ್ರದೇಶದಲ್ಲಿ ಮಳೆನೀರು ಹರಿಯಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕಳೆದ ಕೆಲವು ವರ್ಷಗಳಿಂದ ಮಳೆಗಾಲದಲ್ಲಿ ಕೈಗಾರಿಕಾ ಘಟಕಗಳಿಗೆ ತೀವ್ರ ನಷ್ಟವಾಗಿರುವ ಬಗ್ಗೆ ದೂರುಗಳು ಬಂದಿವೆ. ಕೂಡಲೇ ಕಾರ್ಯೋನ್ಮುಖರಾಗಲು ಜಿಲ್ಲಾಧಿಕಾರಿಯು ಕೆಐಎಡಿಬಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕೊಂಕಣ ರೈಲ್ವೆ ಕಾಮಗಾರಿಯಿಂದ ಬೈಕಂಪಾಡಿ ಸಮೀಪ ತೋಕೂರು ಗ್ರಾಮದ ಕೆಲ ಕುಟುಂಬಗಳಿಗೆ ಲ್ಯಾಂಡ್‌ಲಾಕ್ ಆಗಿರುವ ಕಾರಣ ಸಮಸ್ಯೆಯನ್ನು ಬಗೆಹರಿಸಲು ರೈಲ್ವೇ ಅಧಿಕಾರಿಗಳು ಮುಂದಿನ ಸಭೆಗೆ ಹಾಜರಾಗುವಂತೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಕೈಗಾರಿಕೆಗಳಿಗೆ ನಿವೇಶನ ಹಂಚಿಕೆ ನೀಡುವ ಸಂದರ್ಭ ಇಂಡಸ್ಟ್ರೀಯಲ್ ಪರಿವರ್ತನೆ ಆಗಿರುವ ನಿವೇಶನಗಳನ್ನು ಮಾತ್ರ ನೀಡಬೇಕು. ಇಂಡಸ್ಟ್ರೀಯಲ್ ಕನ್ವರ್ಷನ್ ಪ್ರಕ್ರಿಯೆ ಸಂಪೂರ್ಣವಾಗಿದೆ ಎನ್ನುವುದನ್ನು ಪರಿಶೀಲನೆ ನಡೆಸಿ ನಂತರ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಕೆಐಎಡಿಪಿ/ಕೆಎಸ್‌ಎಸ್‌ಐಡಿಸಿ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಕೈಗಾರಿಕಾ ಸಂಘಗಳ ಬೇಡಿಕೆಯನ್ನು ಸಭೆಯಲ್ಲಿ ಚರ್ಚೆ ಮಾಡಲಾಯಿತು. ಹೊಸ ಕೈಗಾರಿಕಾ ಪ್ರದೇಶ ಅಭಿವೃದ್ಧಿಗಾಗಿ ಜಾಗ ಗುರುತಿಸಿ, ಅಂದಾಜು ಯೋಜನೆಗಳನ್ನು ಹಾಕಿ ನಂತರ ಅಂತಹ ಪ್ರದೇಶದಲ್ಲಿ ನೀರಿನ ಲಭ್ಯತೆ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಐದು ಕೈಗಾರಿಕೆಗಳಿಗೆ ನಿವೇಶನ ಹಂಚಿಕೆ ನೀಡಲಾಯಿತು. ಸಭೆಯಲ್ಲಿ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಗೌರವ್ ಹೆಗ್ಡೆ ಮತ್ತು ವಿವಿಧ ಇಲಾಖೆ ಅಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.







