ಬ್ಯಾನರ್ ತೆರವುಗೊಳಿಸದಿದ್ದಲ್ಲಿ ಕ್ರಿಮಿನಲ್ ಕೇಸ್: ಮನಪಾ ಆಯುಕ್ತ
ಮಂಗಳೂರು, ನ.28: ಪಾಲಿಕೆ ವ್ಯಾಪ್ತಿ ಪ್ಲೆಕ್ಸ್, ಬ್ಯಾನರ್, ಕಟೌಟ್, ಬಂಟಿಂಗ್ಸ್ ಅಳವಡಿಸಿದ್ದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸಮಯದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್, ಪ್ಲೆಕ್ಸ್‌ಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಆದರೆ ಚುನಾವಣೆ ಮುಗಿದ ತಕ್ಷಣವೇ ಪಾಲಿಕೆ ವ್ಯಾಪ್ತಿ ಅನಧಿಕೃತ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‌ಗಳನ್ನು ಅಳವಡಿಸಿರುವುದು ನಗರದ ಸ್ವಚ್ಚತೆ, ಸುರಕ್ಷತೆಗೆ ಅಡ್ಡಿಯಾಗುತ್ತಿರುವುದು ಕಂಡುಬರುತ್ತಿದೆ ಎಂದು ಹೇಳಿದರು.
ನಗರದ ಸ್ವಚ್ಛತೆ ಮತ್ತು ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ಲೆಕ್ಸ್, ಬ್ಯಾನರ್, ಕಟೌಟ್, ಪೋಸ್ಟರ್, ಬಂಟಿಂಗ್ಸ್‌ಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಬಾರದು. ಆದರೆ ಕೆಲವು ಕಾರ್ಯಕ್ರಮ ಸಂಘಟಕರು, ಸಿನೆಮಾ ಪ್ರಚಾರಕರು ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ, ಇನ್ನಿತರ ಉದ್ದೇಶಕ್ಕಾಗಿ ಪ್ರಚುರಪಡಿಸಲು ಕಟೌಟ್ ಇತ್ಯಾದಿಗಳನ್ನು ಹಾಕುತ್ತಿರುವುದು ಕಂಡು ಬಂದಿದೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







