ಅಂಗಾಂಗ ರಚನೆ ಕಲಿಕೆ ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಸವಾಲು: ಡಾ.ಎಚ್.ಡಿ.ನಾರಾಯಣಸ್ವಾಮಿ

ಬೆಂಗಳೂರು, ನ. 28: ಪಶು ಅಂಗಾಂಗ ರಚನಾಶಾಸ್ತ್ರ ಇಂದು ತಂತ್ರಜ್ಞಾನದ ಹೆಗಲಿಗೆ ಹೆಗಲುಕೊಟ್ಟು ಬೆಳೆಯುತ್ತಿರುವುದು ಸಂತಸದ ಸಂಗತಿ. 3 ಡಿ’ ತಂತ್ರಜ್ಞಾನದ ಸಹಾಯದಿಂದ ಪಶು ಅಂಗರಚನಾಶಾಸ್ತ್ರದ ಬಗ್ಗೆ ತಿಳಿದುಕೊಳ್ಳುವುದು ಸುಲಭವಾಗಿದೆ ಎಂದು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿ ಕುಲಪತಿ ಡಾ.ಎಚ್.ಡಿ.ನಾರಾಯಣಸ್ವಾಮಿ ಹೇಳಿದ್ದಾರೆ.
ಗುರುವಾರ ನಗರದ ಹೆಬ್ಬಾಳದ ಪಶುವೈದ್ಯಕೀಯ ವಿದ್ಯಾಲಯದಲ್ಲಿ ಏರ್ಪಡಿಸಿರುವ 3 ದಿನಗಳ 34ನೆ ವಾರ್ಷಿಕ ಪಶು ಅಂಗರಚನಾಶಾಸ್ತ್ರ ತಜ್ಞರ ವಿಚಾರಗೋಷ್ಟಿ ಹಾಗೂ ಪಶು ಅಂಗರಚನಾಶಾಸ್ತ್ರದ ಇತ್ತೀಚಿನ ಬೆಳವಣಿಗೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪಶು ಅಂಗರಚನಾ ಶಾಸ್ತ್ರ ಮತ್ತು ಶರೀರ ಶಾಸ್ತ್ರದ ಕಲಿಕೆಯಲ್ಲಿ ಅದರದೇ ಆದ ಸವಾಲುಗಳೂ ಇವೆ. ಪಶುಗಳ ಅಂಗಾಂಗ ರಚನೆ ಒಂದು ಪ್ರಾಣಿಯಲ್ಲಿ ನೋಡಿ ಕಲಿಯುವುದು ವಿದ್ಯಾರ್ಥಿಗಳ ಮುಂದಿರುವ ಸವಾಲಾಗಿದೆ. ಈ ಮೊದಲಿನಂತೆ ಸುಲಭವಾಗಿ ಪ್ರಾಣಿಗಳ ಮೇಲೆ ಯಾವುದೇ ತರಹದ ಪ್ರಯೋಗಗಳನ್ನು ಮಾಡಲು ಆಗುವುದಿಲ್ಲ. ಅದಕ್ಕೆ ನಿರ್ಭಂದಗಳಿವೆ. ಪ್ರಾಣಿದಯಾ ಸಂಘಗಳಿಂದ ವಿರೋಧಗಳಿವೆ. ಇದರಿಂದಾಗಿ ಪಶು ಅಂಗರಚನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಆದಾಗ್ಯೂ ಸ್ನಾಯುಗಳು ನರಗಳ ಕಾರ್ಯವೈಖರಿ, ಹೃದಯದ ಬಡಿತ, ಅಂಗಾಂಗ ರಚನೆಯನ್ನು ತಂತ್ರಜ್ಞಾನದಿಂದ ಕಲಿಯುವುದಕ್ಕೂ ಸತ್ತಪ್ರಾಣಿಯಿಂದ ತಿಳಿದುಕೊಳ್ಳುವುದಕ್ಕೂ ವ್ಯತ್ಯಾಸವಿದೆ ಎಂದರು.
ಹೆಬ್ಬಾಳದ ಪಶು ಪಶುವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ನಡೆಯುತ್ತಿರುವ ಕಾರ್ಯಾಗಾರದಲ್ಲಿ ವಿಧಿವಿಜ್ಞಾನ ಅಂಗರಚನಾ ಶಾಸ್ತ್ರ, ವನ್ಯಜೀವಿಗಳ ಅಂಗರಚನಾ ಶಾಸ್ತ್ರ, ಅಂಗಶಾಸ್ತ್ರದ ತಂತ್ರಗಳು ಸೇರಿ 14 ವಿಷಯಗಳ ಬಗ್ಗೆ ವಿಷಯ ಮಂಡನೆ ಮತ್ತು ಚರ್ಚೆ ನಡೆಯಲಿದೆ. 14 ರಾಜ್ಯಗಳಿಂದ 160ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು, ಪಶುವೈದ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಪಶುವೈದ್ಯಕೀಯ ಮಹಾ ವಿದ್ಯಾಲಯದ ಡೀನ್ ಡಾ.ನಾರಾಯಣ್ ಭಟ್, ತಿರುಪತಿಯ ವೆಂಕಟೇಶ್ವರ ಪಶು ವೈದ್ಯಕೀಯ ವಿವಿ ಡೀನ್ ಟಿ.ಎಸ್.ಚಂದ್ರಶೇಖರ್ ರಾವ್ ಸೇರಿ ವಿವಿ ಆಡಳಿತ ಮಂಡಳಿ ಸದಸ್ಯರು, ಸಂಶೋಧನಾ ವಿದ್ಯಾರ್ಥಿಗಳು, ಪಶುವೈದ್ಯರು ಭಾಗವಹಿಸಿದ್ದರು.







