ಹರೇಕಳ: ಸರ್ಕಾರಿ ಬಸ್ಸಿಗಾಗಿ ಖಾಸಗಿ ಬಸ್ ತಡೆದು ಪ್ರತಿಭಟನೆ

ಕೊಣಾಜೆ: ಸರ್ಕಾರಿ ಬಸ್ಸುಗಳಿಗಾಗಿ ಹಲವು ವರ್ಷದಿಂದ ಬೇಡಿಕೆ ಸಲ್ಲಿಸಿ ಹಲವು ತಿಂಗಳುಗಳಾದರೂ ಸರ್ಕಾರಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆಂದು ಆರೋಪಿಸಿ ಗುರುವಾರ ಹರೇಕಳ ಗ್ರಾಮ ಪಂಚಾಯಿತಿ ಸದಸ್ಯರು ಹರೇಕಳ ಗ್ರಾಮ ಪಂಚಾಯಿತಿ ಬಳಿ ಖಾಸಗಿ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಬೆಳಗ್ಗೆ ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಸೇರಿ ಶಾಲಾ ಮಕ್ಕಳು ಹೋಗುವ ಬಸ್ಸುಗಳು ಹೋದ ಬಳಿಕ ಬಂದ ಬಸ್ ತಡೆದರು. ಈ ಸಂದರ್ಭ ಪ್ರೊಭೆಷನರಿ ಎಸ್.ಐ. ಶರಣಪ್ಪ ಭಂಡಾರಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಗೆ ಅನುಮತಿ ಪಡೆಯದೆ ಬಸ್ ತಡೆದಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭ ಪೊಲೀಸ್ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ನಡುವೆ ಮಾತಿನ ಚಕಾಮಕಿಯೂ ನಡೆಯಿತು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆರ್‌ಟಿಓ ಅಧಿಕಾರಿ ಬರದೆ ಬಸ್ಸುಗಳನ್ನು ಬಿಡುವುದೇ ಇಲ್ಲ ಎಂದು ಜನಪ್ರತಿನಿಧಿಗಳು ಪಟ್ಟು ಹಿಡಿದರು. ಆದರೆ ಬಸ್ ತಡೆಗೆ ಪೊಲೀಸರು ಬಿಡಲಿಲ್ಲ, ಕೊನೆಗೆ ಆರ್‌ಟಿಓ ಅಧಿಕಾರಿ 11 ಗಂಟೆಗೆ ಬರುತ್ತಾರೆ ಎಂದು ತಿಳಿದಾಗ ಬಸ್ಸನ್ನು ಬಿಡಲಾಯಿತು.
ಬಳಿಕ ಕೊಣಾಜೆ ಠಾಣೆಯ ಎಸ್.ಐ.ಯೋಗೇಶ್ವರನ್ ಆರ್.ಟಿ.ಓಗೆ ಕರೆ ಮಾಡಿ ಸಮಸ್ಯೆ ತಿಳಿಸಿದಾಗ ಇಪ್ಪತ್ತು ನಿಮಿಷದಲ್ಲಿ ಬರುತ್ತೇವೆ ಎಂದು ಎರಡನೇ ಬಾರಿ ತಿಳಿಸಿದರೂ ಒಂದು ಗಂಟೆ ಕಳೆದ ಬಳಿಕ ಆರ್‌ಟಿಓ ಪ್ರತಿನಿಧಿ ನವೀನ್ ಆಗಮಿಸಿದ್ದಾರೆ.
ಬಸ್ ಮಾಲಿಕರು-ಜನಪ್ರತಿನಿಧಿಗಳ ವಾಗ್ವಾದ
ಜನಪ್ರತಿನಿಧಿಗಳು ಆರ್‌ಟಿಓ ಅಧಿಕಾರಿಯನ್ನು ಕಾಯುತ್ತಿದ್ದ ಸಂದರ್ಭ ಬಸ್ ಮಾಲೀಕರಿಬ್ಬರು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭ ಮಾಲಕ ವೇಣು ಗೋಪಾಲ್ ಎಂಬವರು ಬಂದು ಮಾತನಾಡಿದಾಗ ಜನಪ್ರತಿನಿಧಿಗಳು ಮಾತಿನ ಚಕಮಕಿ ನಡೆದು ಪ್ರಕರಣ ವಿಕೋಪಕ್ಕೆ ತಿರುಗಿತು. ಈ ಸಂದರ್ಭ ಕೊಣಾಜೆ ಇನ್ಸ್‌ಪೆಕ್ಟರ್ ರವಿ ನಾಯಕ್ ಆಗಮಿಸಿ ಮಾಲಕರನ್ನು ಕಳುಹಿಸಿ, ಜನಪ್ರತಿನಿಧಿಗಳನ್ನು ಸಮಾಧಾನಪಡಿಸಿದರು. ಅಲ್ಲದೆ ಪ್ರತಿಭಟನಾಕಾರರ ತಡೆಯಲು ಬಸ್ಸಿನ ಮೂಲಕ ಹೆಚ್ಚುವರಿ ಪೊಲೀಸರನ್ನೂ ತರಲಾಗಿದ್ದು, ಪರಿಸರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.
ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಸಭೆ
ಆರ್‌ಟಿಓ ಪ್ರತಿನಿಧಿ ನವೀನ್ ಅವರು ಸ್ಥಳಕ್ಕೆ ಆಗಮಿಸಿದಾಗ ಇನ್ಸ್‌ಪೆಕ್ಟರ್ ರವಿ ನಾಯಕ್ ಅವರ ಮನವಿಯಂತೆ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ಈ ಸಂದರ್ಭ ರವಿ ನಾಯಕ್ ಮಾತನಾಡಿ, ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ತಾಳ್ಮೆಯಿಂದ ಮಾತನಾಡಿ. ಇದುವರೆಗೆ ಸಮಸ್ಯೆ ಆರ್.ಟಿ.ಓ ಮತ್ತು ಪಂಚಾಯಿತಿ ನಡುವೆ ಇತ್ತು. ಈಗ ನಮಗೂ ಬಂದಿದ್ದು ಮೇಲಾಧಿಕಾರಿಗೆ ತಿಳಿಸಿ, ಸರ್ಕಾರಕ್ಕೆ ಮುಟ್ಟಿಸುವ ಪ್ರಯತ್ನ ಮಾಡುತ್ತೇವೆ. ಪರವಾನಿಗೆ ಇದ್ದರೂ ಮದುವೆ ಟ್ರಿಪ್‌ಗೆ ಹೋಗುವ ಬಸ್ಸುಗಳ ಮಾಹಿತಿ ನೀಡಿ. ಜನ ಇದ್ದರೂ, ಇಲ್ಲದಿದ್ದರೂ ಪರವಾನಿಗೆ ಪಡೆದ ಬಳಿಕ ಬಸ್ಸುಗಳು ಸಂಚರಿಸಲೇಬೇಕು ಎಂದು ತಿಳಿಸಿದರು.
ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ಅನಿತಾ ಡಿಸೋಜ ಮಾತನಾಡಿ, ಗ್ರಾಮಕ್ಕೆ ಬಸ್ಸುಗಳಿಲ್ಲದ ಕಾರಣ ಇಲ್ಲಿರುವ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ದೂರುಗಳು ಶಾಲೆಗಳಿಂದ ಬರುತ್ತಿದೆ. ಬಸ್ಸಿಗಾಗಿ ನಾವು ಹಲವು ಬಾರಿ ಅಲೆದಾಟ ನಡೆಸಿದ್ದು, ಇನ್ನು ಭರವಸೆ ಅನಗತ್ಯ ಎಂದರು.
ಉಪಾಧ್ಯಕ್ಷ ಮಹಾಬಲ ಹೆಗ್ಡೆ ಮಾತನಾಡಿ, ಕಳೆದ ನಾಲ್ಕು ಸರ್ಕಾರಿ ಬಸ್ಸಿಗಾಗಿ ಮನವಿ ಸಲ್ಲಿಸುತ್ತಾ ಬರಲಾಗಿದ್ದು, ಅಧಿಕಾರಿಗಳು ನಮ್ಮನ್ನು ಅಲೆದಾಡಿಸಿದರೂ ನಾವು ತಾಳ್ಮೆ ತೆಗೆದುಕೊಂಡಿಲ್ಲ. ಆರ್.ಟಿ.ಓ. ಅಧಿಕಾರಿಗಳು ಗ್ರಾಮಸಭೆಗೂ ಬರುತ್ತಿಲ್ಲ. ಇಂದು ಸ್ಪಷ್ಟ ಉತ್ತರ ನೀಡದಿದ್ದರೆ ಗ್ರಾಮಸ್ಥರನ್ನು ಸೇರಿಸಿ ಉಗ್ರ ಹೋರಾಟ ನಡೆಸಿಯೇ ಸಿದ್ಧ, ಜೈಲಿಗೆ ಬೇಕಾದರೆ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಸ್ಯ ಬದ್ರುದ್ದೀನ್ ಮಾತನಾಡಿ, ಹಲವು ಬಾರಿ ಆರ್‌ಟಿಓಗೆ ಹೋದರೂ ಮತ್ತೆ ನೀವು ಯಾವಾಗ ಬಂದಿದ್ದೀರಿ ಎಂದು ಕೇಳುತ್ತಾರೆ. ಆರ್‌ಟಿಓಗೆ ನೆನಪು ಶಕ್ತಿ ಕಡಿಮೆಯಿದೆಯೇ ಅಥವಾ ಖಾಸಗಿಯವರ ಲಾಭಿಗೆ ಮಣಿದಿದ್ದಾರೆಯೇ ಎನ್ನುವುದು ಗೊತ್ತಾಗುತ್ತಿಲ್ಲ. ಖಾಸಗಿಯವರಿಗೆ ನಷ್ಟ ಆಗುತ್ತಿದ್ದು ವಿಮೆ, ತೆರಿಗೆ ಕಟ್ಟಲು ಸಮಸ್ಯೆಯಿರುವುದರಿಂದ ಅವರು ನಮ್ಮನ್ನು ಉದ್ಧಾರ ಮಾಡುವುದು ಬೇಡ. ತಮ್ಮ ಬಸ್ಸುಗಳನ್ನು ನಿಲ್ಲಿಸಲಿ, ನಮಗೆ ಸರ್ಕಾರಿ ಬಸ್ಸುಗಳೇ ಬರಲಿ ಎಂದು ಆಗ್ರಹಿಸಿದಾಗ ಇತರ ಸದಸ್ಯರು ಬೆಂಬಲ ನೀಡಿದರು.
ಎಂ.ಪಿ.ಮಜೀದ್ ಮಾತನಾಡಿ, ಆರ್‌ಟಿಓಗೆ ಹೋದರೆ ನಾನು ಬಂದು ತಿಂಗಳಷ್ಟೇ ಆಗಿದೆ, ಕಿರಿಕಿರಿ ಮಾಡಬೇಡಿ ಎಂದು ಅಧಿಕಾರಿ ಹೇಳುತ್ತಾರೆ. ಇನ್ನು ನಮಗೆ ನಿಮ್ಮ ಭರವಸೆ ಬೇಡ, ಸರ್ಕಾರಿ ಬಸ್ ಬೇಕೇಬೇಕು ಎಂದು ಒತ್ತಾಯಿಸಿದರು.
ಸದಸ್ಯ ಬಶೀರ್ ಉಂಬುದ ಮಾತನಾಡಿ, ಮಂಗಳೂರಿಂದ ಹರೇಕಳಕ್ಕೆ ಮೂವತ್ತು ಕಿ.ಮೀ. ದೂರವಿದ್ದು, ಬಸ್ಸಿನ ಅವ್ಯವಸ್ಥೆಯಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಅಧಿಕಾರಿಗಳು ಮನವಿಗೆ ಸ್ಪಂದಿಸದೆ, ಬಸ್ ಮಾಲಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಗ್ರಾಮಸಭೆಗೆ ಬರಲು ಆಗುವುದಿಲ್ಲ, 2020ಕ್ಕೆ ನಮ್ಮ ಸಭೆ ಇದೆ ಎಂದು ಉಡಾಫೆಯ ಉತ್ತರ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರ್.ಟಿಓ ಪ್ರತಿನಿಧಿ ನವೀನ್ ಮಾತನಾಡಿ, ಜನವರಿ ನಾಲ್ಕನೇ ತಾರೀಕು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಯಿದ್ದು ಅಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ. ಅದುವರೆಗೆ ಯಾರಾದರೂ ಖಾಸಗಿ ಬಸ್ ಹಾಕುವುದಾದರೆ ತಾತ್ಕಾಲಿಕ ಪರವಾನಿಗೆ ನೀಡಲಾಗುವುದು. ಅಲ್ಲದೆ ಗ್ರಾಮಕ್ಕೆ ತಾತ್ಕಾಲಿಕ ಬಸ್ ಹಾಕುವ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.









