ವಿದೇಶಿಗರ ಮಕ್ಕಳ ವಿದ್ಯಾಭ್ಯಾಸಕ್ಕೆ ಕೈಗೊಂಡಿರುವ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿ: ಹೈಕೋರ್ಟ್ ನಿರ್ದೇಶನ

ಬೆಂಗಳೂರು, ನ.28: ವಿದೇಶಿ ಅಕ್ರಮ ವಲಸಿಗರ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಆರೈಕೆ ಬಗ್ಗೆ ವ್ಯವಸ್ಥೆ ಮಾಡಿರುವ ಕುರಿತು ಮಾಹಿತಿ ನೀಡಲು ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಜಾಮೀನು ಕೋರಿ ಬಂಧಿತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ವಿದೇಶಿಯರ ಮಕ್ಕಳನ್ನು ಸರಕಾರದ ಬಾಲ ಮಂದಿರದಲ್ಲಿಯೇ ಇರಿಸಬಹುದೆ. ಅಲ್ಲದೆ, ಬೇರೆ ದೇಶದಲ್ಲಿ ಯಾವ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ನ್ಯಾಯಪೀಠಕ್ಕೆ ಮಾಹಿತಿ ನೀಡಬೇಕೆಂದು ಸರಕಾರಕ್ಕೆ ನಿರ್ದೇಶಿಸಿತು.
ಮಕ್ಕಳು ಎಂದ ಮೇಲೆ ಎಲ್ಲ ಮಕ್ಕಳೂ ಒಂದೆ. ಅವರ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ. ಹಾಗೊಂದು ಬಾರಿ ಅವರನ್ನು ಶಾಲೆಗೆ ಸೇರಿಸಿದ್ದರೆ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬುದರ ಬಗ್ಗೆಯೂ ಮಾಹಿತಿ ನೀಡಲು ಸೂಚಿಸಿದೆ.
ಪ್ರಕರಣವೇನು: ಆನೇಕಲ್ ತಾಲೂಕಿನ ಕೊಮ್ಮಸಂದ್ರದಲ್ಲಿ ವಾಸವಾಗಿದ್ದ 12 ಮಂದಿ ಬಾಂಗ್ಲಾ ವಲಸಿಗರನ್ನು ಬಂಧಿಸಲಾಗಿತ್ತು. ಇವರೆಲ್ಲರೂ ಈಗ ಜಾಮೀನಿಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.







