ದತ್ತ ಜಯಂತಿ ಹಿನ್ನೆಲೆ: ಬಾಬಾಬುಡನ್ ಗಿರಿಗೆ ಪ್ರವಾಸಿಗರ ವಾಹನಗಳಿಗೆ ನಿರ್ಬಂಧ

KPN
ಚಿಕ್ಕಮಗಳೂರು, ನ.28: ತಾಲೂಕಿನ ಗುರು ದತ್ತಾತ್ರೇಯ ಬಾಬಾಬುಡನ್ ಗಿರಿ ಐ.ಡಿ. ಪೀಠದಲ್ಲಿ ಡಿ.10ರಿಂದ 12ರವರೆಗೆ ದತ್ತ ಜಯಂತಿ ಕಾರ್ಯಕ್ರಮ ನಡೆಯುವ ಹಿನ್ನಲೆ ಡಿ.9ರ ಸಂಜೆ 6ರಿಂದ ಡಿ.13ರ ಬೆಳಗ್ಗೆ 6ವರೆಗೆ ಗಿರಿ ಪ್ರದೇಶಗಳಿಗೆ ತೆರಳಲು ಪ್ರವಾಸಿಗರ ವಾಹನಗಳಿಗೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ತಾಲೂಕಿನ ಬಾಬಾ ಬುಡನ್ಗಿರಿ ವ್ಯಾಪ್ತಿಯ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಮಾಣಿಕ್ಯಧಾರಾ, ಸೀತಾಳಯ್ಯನಗಿರಿ, ಹೊನ್ನಮ್ಮನಹಳ್ಳ ಮತ್ತು ಗುರು ದತ್ತಾತ್ರೇಯ ಬಾಬಾಬುಡನ್ ಗಿರಿ ಐ.ಡಿ ಪೀಠಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರ ಪ್ರವಾಸಿಗರು ಬರುತ್ತಿದ್ದು, ಡಿ.10ರಿಂದ 12ರವರೆಗೆ ದತ್ತಜಯಂತಿ ಕಾರ್ಯಕ್ರಮ ಇರುವುದರಿಂದ ಭಾರೀ ಸಂಖ್ಯೆಯಲ್ಲಿ ದತ್ತ ಭಕ್ತರು ಬರಲಿದ್ದಾರೆ.
ಈ ಹಿನ್ನೆಲೆಯಲ್ಲಿ ಇಲ್ಲಿನ ಕಡಿದಾದ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗುವುದನ್ನು ತಪ್ಪಿಸಲು ಈ ಮೂರು ದಿನಗಳ ಕಾಲ ಗಿರಿ ವ್ಯಾಪ್ತಿಯಲ್ಲಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ವಾಹನಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಡಾ.ಬಗಾದಿ ಗೌತಮ್ ಆದೇಶಿಸಿದ್ದಾರೆ.
ಈ ದಿನಗಳಂದು ಸ್ಥಳೀಯ ಸಾರಿಗೆ ಬಸ್ಗಳು ಹಾಗೂ ಇತರ ಸ್ಥಳೀಯರ ವಾಹನಗಳಿಗೆ ಈ ನಿರ್ಬಂಧ ಇಲ್ಲವಾಗಿದ್ದು, ದತ್ತ ಭಕ್ತರ ವಾಹನಗಳು ಹಾಗೂ ಸ್ಥಳೀಯರ ವಾಹನಗಳನ್ನು ಹೊರತು ಪಡಿಸಿ ಎಲ್ಲ ಪ್ರವಾಸಿಗರ ವಾಹನಗಳನ್ನು ನಿಷೇಧಿಸಲಾಗಿದೆ.







