ಕೃಷಿ ಉತ್ಪನ್ನಗಳ ರಫ್ತು ಹೆಚ್ಚಿಸಲು ಸಾಕಷ್ಟು ಅವಕಾಶವಿದೆ -ಎ.ವಿ.ರಮಣ್
ಮಂಗಳೂರು, ನ. 28: ನವ ಮಂಗಳೂರು ಬಂದರಿನ ಮೂಲಕ ಈಗ ಇರುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ರಷ್ಯಾ, ಯುರೋಪ್ ಸೇರಿದಂತೆ ವಿದೇಶಗಳಿಗೆ ಕೃಷಿ ಉತ್ಪನ್ನಗಳ ರಫ್ತು ಹೆಚ್ಚಿಸಲು ಸಾಕಷ್ಟು ಅವಕಾಶವಿದೆ ಎಂದು ನವ ಮಂಗಳೂರು ಬಂದರು ಮಂಡಳಿಯ ಅಧ್ಯಕ್ಷ ಎ.ವಿ.ರಮಣ್ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿಂದು ನವ ಮಂಗಳೂರು ಬಂದರು ಮಂಡಳಿಯ ವತಿಯಿಂದ ಹಮ್ಮಿಕೊಂಡ ‘ಆಗ್ರಿ ಎಕ್ಸ್‌ಪೋರ್ಟ್ ಮೀಟ್ -2019’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ದೇಶದ ಜಿಡಿಪಿಗೆ ಕೃಷಿ ಕ್ಷೇತ್ರದಿಂದ ಶೇಕಡಾ18ರಷ್ಟು ಕೊಡುಗೆ ನೀಡಲಾಗುತ್ತಿದೆ. ರಾಜ್ಯದ ಕರಾವಳಿ ಜಿಲ್ಲೆಗಳಿಂದ ಜಿಡಿಪಿಗೆ ಶೇ 12ರಷ್ಟು ಕೊಡುಗೆ ನೀಡಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಈ ಪ್ರಮಾಣವನ್ನು ಶೇಕಡಾ 21ಕ್ಕೆ ಏರಿಸಬೇಕಾದರೆ ಕೃಷಿ ಉತ್ಪನ್ನಗಳನ್ನು ರಷ್ಯಾ ಸೇರಿದಂತೆ ಬಾಲ್ಟಿಕ್ ದೇಶಗಳಿಗೆ ರಫ್ತು ಮಾಡಲು ವಿಪುಲ ಅವಕಾಶವಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನ ನಡೆಯಬೇಕಾಗಿದೆ. ಈ ರೀತಿಯ ಕೃಷಿ ಉತ್ಪನ್ನಗಳ ರಫ್ತು ಹೆಚ್ಚಳವಾದರೆ ಕರಾವಳಿಯ ,ರಾಜ್ಯದ ರೈತರಿಗೆ ರಪ್ತುದಾರರಿಗೆ, ನೌಕಾ ಮಂಡಳಿಗೆ ಅನುಕೂಲವಾಗಲಿದೆ. ಮಹಾರಾಷ್ಟ್ರದಲ್ಲಿ ಈ ರೀತಿಯ ಪ್ರಯತ್ನದಿಂದ ಯಶಸ್ಸು ಕಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮಂಗಳೂರು ಬಂದರಿನಲ್ಲಿ ಈ ಯೋಜನೆಯನ್ನು ಹಮ್ಮಿಕೊಂಡಿರುವುದಾಗಿ ರಮಣ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಮುಖ್ಯ ಅತಿತಿಯಾಗಿ ಮಾತನಾಡಿದ ಪೆಸಿಪಿಕ್ ವಾಣಿಜ್ಯ ಮತ್ತು ಕೈಗಾರಿಕಾ ಸಂಘಟನೆಗಳ ಸಂಚಾಲಕ ಸುಮಿತ್ ಚಕ್ರವರ್ತಿ ರಷ್ಯಾ ಸೇರಿದಂತೆ ಯೂರೂಪ್‌ನ ವಿವಿಧ ದೇಶಗಳಲ್ಲಿ ಭಾರತದೊಂದಿಗೆ ಉತ್ತಮ ವ್ಯಾಪಾರ ಸಂಬಂಧದದ ಇತಿಹಾಸವಿದೆ. ಈ ಹಿನ್ನೆಲೆಯಲ್ಲಿ ಜರ್ಮನಿ, ಲಿಥುವೇನಿಯಾ, ನೆದರ್‌ಲ್ಯಾಂಡ್, ಫ್ರಾನ್ಸ್, ಇಟೆಲಿ, ಗ್ರೀಸ್, ಪೋರ್ಚುಗಲ್, ಇಂಗ್ಲೆಂಡ್, ಕೆನಡಾ, ಬ್ರೆಝಿಲ್, ಅಜೈಂಟೈನಾ ದೇಶಗಳೊಂದಿಗೂ ವ್ಯಾಪಾರ ವ್ಯವಹಾರ ಮುಂದುವರಿಸಲು ಸಾಕಷ್ಟು ಅವಕಾಶಗಳಿವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಮಹಾರಾಷ್ಟ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಂಘಟನೆಗಳ ಪ್ರತಿನಿಧಿ ಅತುಲ್ ಕುಲಕರ್ಣಿ, ರಾಜ್ಯ ಚೇಂಬರ್ ಆಫ್ ಕಾಮರ್ಸ್‌ನ ಪ್ರತಿನಿಧಿ ಸುಜ್ಞಾನ ಮೂರ್ತಿ,ಮಾಜಿ ಸಚಿವ ಉದ್ಯಮಿ ನಾಗರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು







