ಉಪಚುನಾವಣಾ ಪ್ರಚಾರಕ್ಕೆ ಮೋದಿ, ಶಾ ಯಾಕೆ ಬಂದಿಲ್ಲ: ಸಿದ್ದರಾಮಯ್ಯ ಪ್ರಶ್ನೆ

ದಾವಣಗೆರೆ, ನ.28: ನೆರೆ ಬಂದಾಗ ನಿರ್ಲಕ್ಷಿಸಿದ ಬಿಜೆಪಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್ 12 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಡಿ.9ರ ನಂತರ ಫಲಿತಾಂಶ ಬಂದರೆ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಾರೆ. ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಯಾಕೆ ಬಂದಿಲ್ಲ. ನೆರೆ ಬಂದಾಗ ನಿರ್ಲಕ್ಷಿಸಿದ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುವುದು ಖಚಿತ ಎಂದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೇಳಿಕೆಯ ಮರ್ಮ ಗೊತ್ತಿಲ್ಲ. ಅದರೆ ನಮ್ಮ ಸೋನಿಯಾಗಾಂಧಿ ಅವರು ಪವರ್ ಪುಲ್ ನಾಯಕಿಯಾಗಿದ್ದಾರೆ ಎಂದ ಅವರು, ಕಾಂಗ್ರೆಸ್‍ನಲ್ಲಿ ಅಸಮಾಧಾನವಿಲ್ಲ. ಎಲ್ಲಾ ಹಿರಿಯ ಮುಖಂಡರು ಪ್ರಚಾರ ಮಾಡುತ್ತಿದ್ದಾರೆ. ಅಸಮಾಧಾನದ ಪ್ರಶ್ನೆಯೇ ನಮ್ಮಲ್ಲಿ ಇಲ್ಲ. ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಹಿರಿಯ ಮುಖಂಡರು ಒಂದೊಂದು ಕಡೆ ಪ್ರಚಾರ ಮಾಡುತ್ತಿದ್ದಾರೆ. ಒಂದಿಬ್ಬರು ಪ್ರಚಾರಕ್ಕೆ ಬಂದಿಲ್ಲ ಎಂದರೆ ಅಸಮಾಧಾನ ಹೇಗಾಗುತ್ತೆ. ವಿ.ಎಸ್.ಉಗ್ರಪ್ಪ ಹಿರಿಯ ಮುಖಂಡರಲ್ಲವೇ? ಎಲ್ಲರೂ ಆಯಾ ಸ್ಥಳಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಹಿರೇಕೆರೂರಿನಲ್ಲಿ ಬಿ. ಸಿ. ಪಾಟೀಲ್ ಸೋಲು ಖಚಿತ. ಬನ್ನಿಕೋಡ್ ಪ್ರಾಮಾಣಿಕ ವ್ಯಕ್ತಿ, ಈ ಬಾರಿ ಗೆಲ್ಲುತ್ತಾರೆ ಎಂದು ತಿಳಿಸಿದರು.
ಪ್ರಸ್ತಕ ಚುನಾವಣೆಯಲ್ಲಿ ಬಿಜೆಪಿ ಯಥೇಚ್ಛವಾಗಿ ಹಣ ಖರ್ಚು ಮಾಡುತ್ತಿದೆ. ಈ ಒಪ್ಪಂದ ಮಾಡಿಕೊಂಡೇ 17 ಶಾಸಕರನ್ನು ಸೆಳೆದದ್ದು. ಸಿಎಂ ಯಡಿಯೂರಪ್ಪ ಒಬ್ಬರೇ ಪ್ರಚಾರಕ್ಕೆ ಹೋಗುತ್ತಾರೆ. ಈ ಬಗ್ಗೆ ಯಾರೂ ಮಾತನಾಡಲ್ಲ ಎಂದರು.







