'ಮಧ್ಯಂತರ ಚುನಾವಣೆ' ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದು ಹೀಗೆ...

ದಾವಣಗೆರೆ, ನ.28: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡಿದ್ದಾರೆ. ಅದರೆ, ಆ ಸ್ಥಿತಿ ರಾಜ್ಯದಲ್ಲಿ ಇಲ್ಲ. ಮುಂದಿನ ಮೂರೂವರೆ ವರ್ಷವು ಬಿಜೆಪಿ ರಾಜ್ಯದಲ್ಲಿ ಪೂರ್ಣವಾಧಿಕಾರ ನಡೆಸಲಿದೆ ಎಂದರು.
ಬಿಜೆಪಿ ರಾಷ್ಟ್ರಮಟ್ಟದಲ್ಲಿ ಹೆಮ್ಮರವಾಗಿ ಬೆಳದಿದೆ. ಅದರೆ, ಕಾಂಗ್ರೆಸ್ ಜೆಡಿಎಸ್ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ. 17 ಜನ ಶಾಸಕರಿಂದಾಗಿ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಜನರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿರಬೇಕು ಎಂದು ನಿರ್ಧಾರ ಮಾಡಿದ್ದಾರೆ. ಪ್ರಸ್ತುತ ಚುನಾವಣೆಯಲ್ಲಿ ಕಾಂಗ್ರೆಸ್ ಸಾಕಷ್ಟು ಹಣ ಹಂಚಿಕೆ ಮಾಡುತ್ತಿದೆ. ಎಷ್ಟೇ ಹಣ ಹಂಚಿಕೆ ಮಾಡಿದರೂ 15 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ತಿಳಿಸಿದರು.
ನಾಯಕ ಸಮುದಾಯಕ್ಕೆ 7.5 ರಷ್ಟು ಮೀಸಲಾತಿ ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಯುತ್ತಿದ್ದು, ಈಗಾಗಲೇ ನ್ಯಾ.ನಾಗಮೋಹನದಾಸ್ ಅವರು ಇದರ ಬಗ್ಗೆ ಸೂಕ್ತ ದಾಖಲೆ ಶೇಖರಣೆ ಮಾಡುತ್ತಿದ್ದು, ವರದಿ ಬಂದ ನಂತರ ನಾಯಕ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ನನಗೆ ಅಧಿಕಾರ ಮುಖ್ಯವಲ್ಲ ಸಮುದಾಯದ ಮೀಸಲಾತಿ ಕೊಡಿಸುವುದಾಗಿದೆ ಮುಖ್ಯ ಎಂದರು.
ಸಿದ್ದರಾಮಯ್ಯ ಒಬ್ಬಂಟಿ: ಉಪಚುನಾವಣೆಯಲ್ಲಿ ವಿಪಕ್ಷನಾಯಕ ಒಬ್ಬಂಟಿಯಾಗಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರಾದ ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಯಾವುದೇ ನಾಯಕರು ಪ್ರಚಾರಕ್ಕೆ ಬರುತ್ತಿಲ್ಲ. ಸಿದ್ದರಾಮಯ್ಯ ಅವರೊಬ್ಬರೆ ಒಬ್ಬಂಟಿಯಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಆರೋಗ್ಯ ಇಲಾಖೆಯ ಡಿ ದರ್ಜೆ, ನರ್ಸ್ ಸೇರಿದಂತೆ ಯಾವುದೇ ಒಬ್ಬ ನೌಕರರನ್ನು ಕೆಲಸದಿಂದ ತೆಗೆಯಲ್ಲ, ಈ ಪ್ರಸ್ತಾಪ ನಮ್ಮ ಇಲಾಖೆಯ ಮುಂದಿಲ್ಲ. ನೌಕರರಿಗೆ ಈ ಬಗ್ಗೆ ಭಯಬೇಡ ಎಂದರು.







