ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆಯನ್ನೇ ಹರಿಸುತ್ತಿದೆ: ಮಾಜಿ ಶಾಸಕ ಎಂ.ಕೆ.ಸೋಮಶೇಖರ್
ಮೈಸೂರು: ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಮೈಸೂರು,ನ.28: ಸುಪ್ರೀಂಕೋರ್ಟ್ ಅನರ್ಹ ಶಾಸಕರನ್ನು ಅನರ್ಹರೇ ಎಂದು ತೀರ್ಮಾನಿಸಿದ್ದರೂ, ಅವರನ್ನು ಮತ್ತೆ ಚುನಾವಣೆಗೆ ನಿಲ್ಲಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹಣದ ಹೊಳೆಯನ್ನು ಹರಿಸುತ್ತಿದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಪುರಭವನದ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಬಳಿ ಶುಕ್ರವಾರ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಸಂವಿಧಾನ ಹಾಗೂ ಸುಪ್ರೀಂಕೋರ್ಟ್ ಅನ್ನು ಅಣಕ ಮಾಡುವಂತೆ ಬಿಜೆಪಿ ವರ್ತಿಸುತ್ತಿದೆ. ಕೇಂದ್ರ ಸರ್ಕಾರ ಸಂವಿಧಾನಕ್ಕೆ ಗೌರವ ಕೊಟ್ಟು ನಡೆದುಕೊಳ್ಳಬೇಕು. ಆದರೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ನೇತೃತ್ವದ ಬಿಜೆಪಿ ಸರ್ಕಾರ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರ ಕಚೇರಿಯನ್ನು ಇನ್ನಿಲ್ಲದಂತೆ ದುರುಪಯೋಗಪಡಿಸಿಕೊಂಡು ಈಗ ನಗೆಪಾಟಲಿಗೀಡಾಗಿದೆ ಎಂದು ಲೇವಡಿ ಮಾಡಿದರು.
ಅಧಿಕಾರದ ದುರಾಸೆಗೆ ಬಿದ್ದು ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳೇ ಇಲ್ಲದಂತೆ ಆಡಳಿತ ನಡೆಸುವ ವಿಕ್ಷಿಪ್ತ ಮನಸ್ಥಿತಿ ಹೊಂದಿರುವ ಬಿಜೆಪಿ ನಾಯಕರು ಈ ಬೆಳವಣಿಗೆಯಿಂದ ಎಚ್ಚೆತ್ತುಕೊಳ್ಳಬೇಕು. ಅಧಿಕಾರ ಹಾವು-ಏಣಿಯಾಟವಿದ್ದಂತೆ. ಮತದಾರ ಮನಸ್ಸು ಮಾಡಿದರೆ ಆಡಳಿತದಲ್ಲಿರುವವರು ಬೀದಿಗೆಸೆಯಲ್ಪಡುತ್ತಾರೆ. ಮೋದಿ ಅಮಿತ್ ಶಾ ಇದನ್ನರಿತು ತಮ್ಮ ಉಳಿದ ಅಧಿಕಾರಾವಧಿಯಲ್ಲಿ ಸಂವಿಧಾನಕ್ಕೆ ಬೆಲೆಕೊಟ್ಟು ಆಡಳಿತ ನಡೆಸುವುದು ಒಳ್ಳೆಯದು. ಕೇವಲ ಅಧಿಕಾರಕ್ಕಾಗಿ ಎಂತಹ ಭ್ರಷ್ಟರ ಜೊತೆಗೂ ರಾಜಿ ಮಾಡಿಕೊಳ್ಳಬಲ್ಲೆವು, ಹಣದಿಂದ ಎಲ್ಲರನ್ನೂ ಕೊಂಡುಕೊಳ್ಳಬಲ್ಲೆವು ಎನ್ನುವುದು ಸರಿಯಲ್ಲ. ಅಜಿತ್ ಪವಾರ್ ಅವರನ್ನು ಭ್ರಷ್ಟಾಚಾರ ಪ್ರಕರಣದಿಂದ ಕೈಬಿಟ್ಟ ಘಟನೆಯಂತೂ ಬಿಜೆಪಿ ಪಕ್ಷ ತನ್ನ ಲಾಭಕ್ಕಾಗಿ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತದೆ ಎನ್ನುವುದು ಸತ್ಯವಾಗಿ ಕಾಣುತ್ತಿದೆ ಎಂದು ಆರೋಪಿಸಿದರು.
ಈ ಬೇಳವಣಿಗೆಗಳು ಅಪಾಯಕಾರಿ. ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೇರಲು ಸಂವಿಧಾನವನ್ನೇ ಬುಡಮೇಲು ಮಾಡಿದ್ದ ಕೇಂದ್ರ ಸರ್ಕಾರಕ್ಕೆ ಸಂವಿಧಾನ ದಿನದಂದೇ ಕೋರ್ಟ್ ತಕ್ಕ ಪಾಠ ಕಲಿಸಿದೆ. ಇದು ಎಲ್ಲ ರಾಜಕೀಯ ಪಕ್ಷಗಳಿಗೆ ಮಾರ್ಗದರ್ಶಿಯಾಗಬೇಕು. ಸಂವಿಧಾನದೊಂದಿಗೆ ಹುಡುಗಾಟಿಕೆ ನಿಲ್ಲಬೇಕು. ಕರ್ನಾಟಕದಲ್ಲೂ 25, 30 ಕೋಟಿ ರೂ. ನೀಡಿ ಶಾಸಕರನ್ನು ಖರೀದಿಸಿ ಅವರಿಂದ ರಾಜೀನಾಮೆ ಕೊಡಿಸಿದರು. ಸ್ಪೀಕರ್ ರಮೇಶ್ ಕುಮಾರ್ ಇವರನ್ನು ಅನರ್ಹರೆಂದು ಘೋಷಿಸಿದ್ದನ್ನೇ ಸುಪ್ರೀಂಕೋರ್ಟ್ ಎತ್ತಿ ಹಿಡಿದು ಇವರು ಅನರ್ಹರೇ ಎಂದು ತೀರ್ಮಾನಿಸಿದ್ದರೂ ಮತ್ತೆ ಅವರನ್ನು ಚುನಾವಣೆಗೆ ನಿಲ್ಲಿಸಿ ಹಣದ ಹೊಳೆ ಹರಿಸುತ್ತಿರುವ ಬಿಜೆಪಿ ನಿಲುವು ಖಂಡನೀಯ. ಬಿಜೆಪಿಯವರು ಮಾಡುತ್ತಿರುವ ಸಂವಿಧಾನ ಬಾಹಿರ ಕೆಲಸಗಳಿಗೆ ಮತದಾರ ತಕ್ಕ ಉತ್ತರ ನೀಡಲಿದ್ದಾನೆ ಎಂದರು.
ಪ್ರತಿಭಟನೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್, ನಿಜಗುಣ, ರಾಜೇಶ್, ಡೈರಿ ವೆಂಕಟೇಶ್, ರಮೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.







