‘ಬಯಲು ಶೌಚಮುಕ್ತ ಗ್ರಾಮ’ ಘೋಷಣೆಯೇ ಸುಳ್ಳು: ಸಚಿವ ಈಶ್ವರಪ್ಪ

ಹುಬ್ಬಳ್ಳಿ, ಜ. 29: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ನೀಡುವ ಅಂಕಿ-ಅಂಶಗಳ ಆಧಾರದ ಮೇಲೆ ಬಯಲು ಶೌಚಮುಕ್ತ ಗ್ರಾಮ ಎಂದು ಘೋಷಣೆ ಮಾಡುವುದೇ ಸುಳ್ಳು. ಇದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಅಧಿಕಾರಿಗಳು ತಪ್ಪು ಅಂಕಿ-ಅಂಶಗಳನ್ನು ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಆದರೆ, ಮೊದಲಿಗಿಂತಲೂ ಈಗ ಹೆಚ್ಚು ಶೌಚಾಲಯಗಳು ಇವೆ. ನಿರಂತರವಾಗಿ ನಿರ್ಮಾಣವಾಗುತ್ತಿವೆ ಎಂದರು.
ಗ್ರಾಮೀಣ ಪ್ರದೇಶದ ಬಹಳಷ್ಟು ಜನ ಶೌಚಾಲಯಗಳನ್ನು ಬಳಸುತ್ತಿಲ್ಲ. ಜಾಗದ ಕೊರತೆ ಇದ್ದರೆ ಸಾರ್ವಜನಿಕ ಶೌಚಾಲಯಗಳನ್ನು ಕಟ್ಟಲಾಗುತ್ತಿದೆ. ಇವುಗಳ ನಿರ್ವಹಣೆ ಯಾರು ಮಾಡಬೇಕು ಎನ್ನುವುದೇ ದೊಡ್ಡ ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.
ಪ್ರತಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಒಣ ಹಾಗೂ ಹಸಿ ಕಸ ಸಂಗ್ರಹ, ವಿದ್ಯುತ್ ಉದ್ದೇಶಕ್ಕೆ ಬಳಸಲು ಸೋಲಾರ್ ಅಳವಡಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಮುಂದಿನ ಮೂರೂವರೆ ವರ್ಷಗಳ ಅವಧಿಯಲ್ಲಿ ರಾಜ್ಯದ 6,021 ಗ್ರಾ.ಪಂ.ಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತದೆ. ಇದಕ್ಕೆ ಕೇಂದ್ರ ಸರಕಾರ ಪ್ರತಿ ಪಂಚಾಯತ್ ಗೆ 20 ಲಕ್ಷ ರೂ.ಅನುದಾನ ನೀಡುತ್ತದೆ ಎಂದರು.
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರೂ.ಅನುದಾನ ನೀಡಲಾಗಿದೆ. ಹಂತ ಹಂತವಾಗಿ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದ ಅವರು, ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಅನುಷ್ಠಾನ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸದ ಪಿಡಿಓಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.







