ಪ್ರಸಿದ್ಧ ಮಲಯಾಳಂ ಕವಿ ಅಕ್ಕಿತಂಗೆ 55ನೆ ಜ್ಞಾನಪೀಠ ಪುರಸ್ಕಾರ

photo: www.mathrubhumi.com
ತಿರುವನಂತಪುರ, ನ.29: ‘ಅಕ್ಕಿತಂ ’ಎಂದೇ ಜನಪ್ರಿಯರಾಗಿರುವ ಖ್ಯಾತ ಮಲಯಾಳಂ ಕವಿ ಅಚ್ಯುತನ್ ನಂಬೂದಿರಿ (93) ಅವರು ಸಾಹಿತ್ಯಕ್ಕೆ ತನ್ನ ಮೇರು ಕೊಡುಗೆಗಾಗಿ ಶುಕ್ರವಾರ 2019ನೇ ಸಾಲಿನ ಪ್ರತಿಷ್ಠಿತ ‘ಜ್ಞಾನಪೀಠ ಪ್ರಶಸ್ತಿ’ಗೆ ಪಾತ್ರರಾಗಿದ್ದಾರೆ.
ಅಕ್ಕಿತಂ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಗೆ ಪಾತ್ರರಾಗಿರುವ ಕೇರಳದ ಆರನೇ ಸಾಹಿತಿಯಾಗಿದ್ದಾರೆ. ಇದಕ್ಕೂ ಮುನ್ನ ಜಿ.ಶಂಕರ ಕುರುಪ್ (1965),ಎಸ್.ಕೆ.ಪೋಟಕ್ಕಾಡ್ (1980),ತಳಗಿ ಶಿವಶಂಕರ ಪಿಳ್ಳೈ (1984), ಎಂ.ಟಿ.ವಾಸುದೇವನ್ ನಾಯರ್ (1995) ಮತ್ತು ಒಎನ್ವಿ ಕುರುಪ್ (2007) ಅವರು ಜ್ಞಾನಪೀಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
‘ಮಲಯಾಳಮ್ನಲ್ಲಿ ಹಲವಾರು ಮಹಾನ್ ಕವಿಗಳಿದ್ದಾರೆ. ಸಾಹಿತ್ಯವು ಜೀವನದಲ್ಲಿ ಕಣ್ಣೀರಿನ ಶೋಧವಾಗಿದೆ ಎಂದು ಎಡಶ್ಶೇರಿ (ಎಡಶ್ಶೇರಿ ಗೋವಿಂದನ್ ನಾಯರ್) ನನಗೆ ಕಲಿಸಿದ್ದರು. ನಾನು ಬರೆದಿದ್ದೆಲ್ಲವೂ ಸರಿ ಎಂದು ನಾನು ಹೇಳುವುದಿಲ್ಲ. ಅದರಲ್ಲಿ ತಪ್ಪುಗಳಿರಬಹುದು. ದಯವಿಟ್ಟು ಕ್ಷಮಿಸಿ’ ಎಂದು ಪ್ರಶಸ್ತಿ ಪಡೆದ ಖುಷಿಯಲ್ಲಿದ್ದ ಅಕ್ಕಿತಂ ಮಾಧ್ಯಮಗಳಿಗೆ ತಿಳಿಸಿದರು. ಇತರ ಭಾಷೆಗಳಿಗೆ ತನ್ನ ಕೃತಿಗಳ ಅನುವಾದಕರು ಸೇರಿದಂತೆ ಮಲಯಾಳಂ ಸಾಹಿತ್ಯ ಲೋಕದ ಇತರ ಹಲವರ ಆಭಾರವನ್ನೂ ಅಕ್ಕಿತಂ ಮನ್ನಿಸಿದರು.
1926ರಲ್ಲಿ ಪಾಲಕ್ಕಾಡ್ ಜಿಲ್ಲೆಯಲ್ಲಿ ನಂಬೂದಿರಿ ಕುಟುಂಬದಲ್ಲಿ ಜನಿಸಿದ ಅಕ್ಕಿತಂ ಅಸ್ಪೃಶ್ಯತೆಯ ವಿರುದ್ಧ ಪ್ರಖರ ವಾಗ್ಮಿಯಾಗಿದ್ದರು. 1947ರಲ್ಲಿ ಅಸ್ಪೃಶ್ಯತೆಯ ವಿರುದ್ಧ ನಡೆದಿದ್ದ ಪಾಲಿಯಂ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಮೂಲಕ ಅವರು ಹೋರಾಟಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದ್ದರು. ಬ್ರಾಹ್ಮಣೇತರರಲ್ಲಿ ವೇದಗಳ ಜ್ಞಾನವನ್ನು ಹರಡಲೂ ಅವರು ಶ್ರಮಿಸಿದ್ದರು.
ಇರುವತ್ತಾಂ ನೂಟ್ರಾಂಡಿಂಡೆ ಇತಿಹಾಸಂ (20ನೇ ಶತಮಾನದ ಮಹಾಕಾವ್ಯ), ಬಾಲಿದರ್ಶನಂ, ದೇಶ ಸೇವಿಕಾ, ಅರಂಗೇಟ್ರಂ, ನಿಮಿಷ ಕ್ಷೇತ್ರಂ ಮತ್ತು ಇಡಿಂಜು ಪೊಲಿಂಜ ಲೋಕಂ ಇವು ಅವರ ಕೆಲವು ಖ್ಯಾತ ಕೃತಿಗಳಾಗಿವೆ.
ಅಕ್ಕಿತಂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ‘ಬಾಲಿದರ್ಶನಂ’ಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗೆದ್ದಿರುವ ಅವರು,ಆಸಾನ,ವಲ್ಲತ್ತೋಳ,ಲಲಿತಾಂಬಿಕಾ ಸಾಹಿತ್ಯ,ಕೇರಳ ಸಾಹಿತ್ಯ ಅಕಾಡೆಮಿ,ಒಡಕ್ಕುಳಲ್,ಕೃಷ್ಣ ಗೀಧಿ,ವಯಲಾರ್,ನೆಲ್ಲಪ್ಪಾಡ್ ಇತ್ಯಾದಿ ಪ್ರಶಸ್ತಿಗಳೊಂದಿಗೆ ಜ್ಞಾನಪೀಠ ಪ್ರಶಸ್ತಿ ಸಮಿತಿಯ ಮೂರ್ತಿ ದೇವಿ ಪುರಸ್ಕಾರವನ್ನೂ ಪಡೆದಿದ್ದಾರೆ.







