ಡಿ.1: ರೇಡಿಯೋ ಸಾರಂಗ್‌ನ ದಶಮಾನೋತ್ಸವ ಸಮಾರೋಪ
ಮಂಗಳೂರು, ನ. 29: ಸಂತ ಅಲೋಶಿಯಸ್ ಕಾಲೇಜಿನ ರೇಡಿಯೋ ಸಾರಂಗ್ 107.6 ಎ್.ಎಂ.ನ ದಶಮಾನೋತ್ಸವದ ಸಮಾರೋಪವು ಡಿ.1ರಂದು ಸಂಜೆ 4ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಫಾ.ಮೆಲ್ವಿನ್ ಪಿಂಟೋ ಎಸ್ ಜೆ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ಜೆಸ್ವಿಟ್ ಪ್ರಾಂತ್ಯದ ಮುಖ್ಯಸ್ಥ ಫಾ.ಜೆರೊಮ್ ಸ್ಟ್ಯಾನಿಸ್ಲಾಸ್ ಡಿಸೋಜ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎ. ವಿವೇಕ ರೈ, ಶ್ರೀ ರಾಮಕೃಷ್ಣ ಮಠದ ಸ್ವಾಮಿ ಏಕಗಮ್ಯಾನಂದ, ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ. ಖಾದರ್, ಮಾಜಿ ಶಾಸಕ ಜೆ. ಆರ್.ಲೋಬೊ, ದ.ಕ.ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ರೇಡಿಯೋ ಸಾರಂಗ್‌ನ ಸ್ಥಾಪಕ ನಿರ್ದೇಶಕ ಫಾ.ರಿಚ್ಚರ್ಡ್ ರೇಗೊ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಮಧ್ಯಾಹ್ನ 2ಕ್ಕೆ ‘ಪಾಂಚಜನ್ಯ’ ಯಕ್ಷಗಾನ ತಾಳಮದ್ದಳೆ, ರಾತ್ರಿ 7ಕ್ಕೆ ವಿಠಲ ನಾಯಕ್ ಕಲ್ಲಡ್ಕ ಬಳಗದವರಿಂದ ‘ಗೀತ ಸಾಹಿತ್ಯ ಸಂಭ್ರಮ’ ನಡೆಯಲಿದ್ದು, ಸಂಜೆ 5ಕ್ಕೆ ಡಾ. ಅಮೀನ್ ಸಂಕಮಾರ್‌ರ ‘ಗೇನದ ನಡೆ’ ಧ್ವನಿ ಸುರುಳಿ ಬಿಡುಗಡೆಯಾಗಲಿದೆ. ಈ ಸಂದರ್ಭ ರೇಡಿಯೋ ಸಾರಂಗ್ ಅಶಕ್ತ ಕೇಳುಗರಿಗೆ 2 ದ್ವಿಚಕ್ರ ವಾಹನ, ಸ್ವ ಉದ್ಯೋಗಕ್ಕೆಂದು 12 ಹೊಲಿಗೆಯಂತ್ರ ಮತ್ತು ಬೀದಿ ಬದಿ ವ್ಯಾಪಾರಸ್ಥರಿಗೆ 20 ಕೊಡೆಯನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪ್ಯಾಟ್ಸನ್ ಪಿರೇರ, ಶ್ವೇತಾ ಮತ್ತು ಅಭಿಷೇಕ್ ಶೆಟ್ಟಿ ಉಪಸ್ಥಿತರಿದ್ದರು.







