ರೋಶನ್ ಬೇಗ್ ಇದ್ದರೆ ಬಿಜೆಪಿಗೆ ಮತ ಬೀಳಲ್ಲ: ಡಿ.ಕೆ.ಶಿವಕುಮಾರ್

ಬೆಂಗಳೂರು, ನ.29: ಆರ್.ರೋಶನ್ ಬೇಗ್ ಅನ್ನು ಬಿಜೆಪಿ ಹತ್ತಿರವೇ ಸೇರಿಸಿಕೊಂಡಿಲ್ಲ. ಇದಕ್ಕೆ ಮತ ಬೀಳಲ್ಲ ಎನ್ನುವ ಕಾರಣ ಇದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಶುಕ್ರವಾರ ಇಲ್ಲಿನ ವಸಂತ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಪ್ರಚಾರ ನಡೆಸಿ ಮಾತನಾಡಿದ ಅವರು, ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯ ನಾಯಕ ರೋಶನ್ ಬೇಗ್, ತಾನು ಬೆಳೆದ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ದ್ರೋಹ ಮಾಡಿದರು. ಇದೀಗ ಬಿಜೆಪಿಗೆ ಹೋಗಿದ್ದಾರೆ. ಆದರೆ, ಅವರನ್ನು ಹತ್ತಿರಕ್ಕೂ ಸೇರಿಸಿಕೊಂಡಿಲ್ಲ. ನೀನು ಹತ್ತಿರ ಇದ್ದರೆ, ಬೀಳೋ ಮತವೂ ಬೀಳಲ್ಲ ಎಂದು ದೂರ ಇಟ್ಟಿದ್ದಾರೆ ಎಂದು ಆರೋಪಿಸಿದರು.
ನಮ್ಮ ಹಳ್ಳಿಗಳಲ್ಲಿ ಕುರಿ, ಕೋಳಿಗಳನ್ನು ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಆದರೆ, ಇವರು (ಅನರ್ಹರು) ಮಾರಾಟವಾಗುವುದಲ್ಲದೆ, ಈ ಮತದಾರರ ತೀರ್ಪನ್ನು ಮಾರಿದ್ದಾರೆ ಎಂದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ, ಯಾರಿಗೆ ಏನಾದರೂ ಪರವಾಗಿಲ್ಲ ತಾನು ಕಡೇ ಬಾರಿ ಸಿಎಂ ಆಗಬೇಕೆಂದು ಮೈತ್ರಿ ಸರಕಾರ ಬೀಳಿಸಲು ಪ್ರಯತ್ನಿಸಿದರು. ಕೊನೆಗೆ ಕಾಂಗ್ರೆಸ್ ಹಾಗೂ ದಳದ ಶಾಸಕರನ್ನೆ ಸೆಳೆದು ಸರಕಾರ ಮಾಡಿದ್ದಾರೆ ಎಂದರು.
ಮಹಾರಾಷ್ಟ್ರ ಹಾಗೂ ಬೇರೆ ರಾಜ್ಯಗಳಲ್ಲಿ ಚುನಾವಣೆ ನೋಡಿದ್ದೀರಿ. ಲೋಕಸಭೆ ಚುನಾವಣೆಯಲ್ಲಿ ಅಷ್ಟು ದೊಡ್ಡ ಬಹುಮತ ಬಂದರೂ ಒಂದು ರಾಜ್ಯದಲ್ಲಿ ಕೊಟ್ಟ ಮಾತಿಗೆ ಬಿಜೆಪಿ ಬದ್ಧವಾಗಿಲ್ಲ. ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ಸರಕಾರ ರಚನೆ ಮಾಡುತ್ತೇವೆ ಎಂದಾಗ ತಕ್ಷಣ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದು ವಾಮಮಾರ್ಗದಲ್ಲಿ ಸರಕಾರ ಮಾಡಿ ಬಿಜೆಪಿ ಮರ್ಯಾದೆ ಕಳೆದುಕೊಂಡಿತು ಎಂದು ಶಿವಕುಮಾರ್ ಹೇಳಿದರು.







