ಅನಿಯಂತ್ರಿತ ಮನೆ ಬಾಡಿಗೆ ಏರಿಕೆ ವಿರುದ್ಧ ಕ್ರಮಕ್ಕೆ ಡಿವೈಎಫ್‌ಐ ಒತ್ತಾಯ
ಉಳ್ಳಾಲ, ನ.29: ಉಳ್ಳಾಲ ನಗರ, ಕೆ.ಸಿ ರೋಡು, ಕುತ್ತಾರ್, ದೇರಳಕಟ್ಟೆ, ಮುಡಿಪು ಮತ್ತಿತರ ಕಡೆ ಮನೆ ಬಾಡಿಗೆಯನ್ನು ಅನಿಯಂತ್ರಿತವಾಗಿ ಏರಿಸುತ್ತಿರುವ ಘಟನೆಗಳು ವರದಿಯಾಗುತ್ತಿದ್ದು, ಇದರಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ನಾಗರೀಕರು ತೊಂದರೆ ಅನುಭವಿಸುತ್ತಿದ್ದಾರೆ. ಸದ್ಯದ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ಈ ರೀತಿಯ ಏರಿಕೆ ಬಡವರ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಈ ರೀತಿಯ ಅನಿಯಂತ್ರಿತ ಮನೆ ಬಾಡಿಗೆ ಏರಿಕೆಯ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಉಳ್ಳಾಲ ವಲಯ ಡಿವೈಎಫ್‌ಐ ಒತ್ತಾಯಿಸಿದೆ.
ಸರಕಾರ ಪ್ರತಿಯೊಬ್ಬರಿಗೆ ವಸತಿ ಕಲ್ಪಿಸುವ ಬಗ್ಗೆ ಘೋಷಣೆಗಳನ್ನು ಹೊರಡಿಸುತ್ತಿದೆ. ಆದರೆ ಮಧ್ಯಮ ವರ್ಗದ ಮತ್ತು ಬಡತನ ರೇಖೆಗಿಂತ ಕೆಳಗಿರುವ ಶೇ 50ಕ್ಕಿಂತಲೂ ಹೆಚ್ಚು ಜನ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಆದರೆ ಪ್ರತೀ ವರ್ಷ ಶೇ.10ರಿಂದ ಶೇ.20 ಬಾಡಿಗೆಯನ್ನು ಮನೆ ಮಾಲಕರು ಏರಿಸುತ್ತಿರುವ ಕಾರಣ ಬಾಡಿಗೆ ಮನೆಯಲ್ಲಿರುವವರು ಬಾಡಿಗೆ ಕಟ್ಟದ ಪರಿಸ್ಥಿತಿ ಯಲ್ಲಿದ್ದಾರೆ. ಏರಿಸಿದ ಬಾಡಿಗೆ ಕಟ್ಟಲು ಒಪ್ಪದೆ ಇದ್ದಲ್ಲಿ ಮನೆ ಖಾಲಿ ಮಾಡುವಂತೆ ಬಲವಂತ ಪಡಿಸಲಾಗುತ್ತಿದೆ. ಇದರಿಂದ ಬಾಡಿಗೆ ಮನೆಯಲ್ಲಿ ಸಂಕಷ್ಟ ಎದುರಿಸುತ್ತಿದ್ದು ಸರಕಾರ ಈ ರೀತಿಯ ಅನಿಯಂತ್ರಿತ ಮನೆ ಬಾಡಿಗೆ ಏರಿಕೆಯ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಡಿವೈಎಫ್‌ಐ ಒತ್ತಾಯಿಸಿದೆ.