ಫೋರ್ಬ್ಸ್ ಪ್ರಕಾರ ಭಾರತದ ಈ ಉದ್ಯಮಿ ಜಗತ್ತಿನ 9ನೇ ಅತಿ ಶ್ರೀಮಂತ

ನ್ಯೂಯಾರ್ಕ್, ನ. 29: ‘ಫೋರ್ಬ್ಸ್’ ಪತ್ರಿಕೆಯ ‘ರಿಯಲ್ ಟೈಮ್ ಬಿಲಿಯನೇರ್ಸ್ ಪಟ್ಟಿ’ (ಈ ಕ್ಷಣದ ಬಿಲಿಯಾಧೀಶರ ಪಟ್ಟಿ)ಯ ಪ್ರಕಾರ, ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಜಗತ್ತಿನ ಒಂಬತ್ತನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಈ ವರ್ಷದ ಪೂರ್ವಾರ್ಧದಲ್ಲಿ ಬಿಡುಗಡೆಯಾದ ಫೋರ್ಬ್ಸ್‌ನ 2019ರ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ 13ನೇ ಸ್ಥಾನದಲ್ಲಿದ್ದರು. ಅವರ ಒಡೆತನದ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) 10 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಮೈಲಿಗಲ್ಲನ್ನು ದಾಟಿರುವುದು ಅವರ ಪ್ರಸಕ್ತ ಸಂಪತ್ತು ಹೆಚ್ಚಳಕ್ಕೆ ಕಾರಣವಾಗಿದೆ.
ಆರ್‌ಐಎಲ್ ಗುರುವಾರ 10 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಮೈಲಿಗಲ್ಲನ್ನು ದಾಟಿದ್ದು, ಈ ಸಾಧನೆಗೈದ ಭಾರತದ ಮೊದಲ ಕಂಪೆನಿಯಾಗಿದೆ.
ಫೋರ್ಬ್ಸ್‌ನ ‘ಈ ಕ್ಷಣದ ಬಿಲಿಯಾಧೀಶರ ಪಟ್ಟಿ’ಯ ಪ್ರಕಾರ, ಆರ್‌ಐಎಲ್ ಅಧ್ಯಕ್ಷರ ‘ಈ ಕ್ಷಣದ ನಿವ್ವಳ ಸಂಪತ್ತು’ (ರಿಯಲ್ ಟೈಮ್ ನೆಟ್ ವರ್ತ್) ಗುರುವಾರದ ವೇಳೆಗೆ 60.8 ಬಿಲಿಯ ಡಾಲರ್ (4,36,334 ಕೋಟಿ ರೂಪಾಯಿ) ಆಗಿತ್ತು.
ಪಟ್ಟಿಯ ಪ್ರಥಮ ಸ್ಥಾನದಲ್ಲಿ ಅಮೆಝಾನ್ ಸ್ಥಾಪಕ ಹಾಗೂ ಸಿಇಒ ಜೆಫ್ ಬೆರೆಸ್ ಇದ್ದಾರೆ. ಅವರ ಈ ಕ್ಷಣದ ನಿವ್ವಳ ಸಂಪತ್ತು ಗುರುವಾರದ ವೇಳೆಗೆ 113 ಬಿಲಿಯ ಡಾಲರ್ (ಸುಮಾರು 8.12 ಲಕ್ಷ ಕೋಟಿ ರೂಪಾಯಿ) ಆಗಿತ್ತು.
ಭಾರತದಲ್ಲಿ ರಿಲಯನ್ಸ್ ಬಳಿಕ, ಟಿಸಿಎಸ್ ಎರಡನೇ ಅತ್ಯಂತ ವೌಲ್ಯಯುತ ಕಂಪೆನಿಯಾಗಿದೆ. ನಂತರದ ಸ್ಥಾನಗಳಲ್ಲಿ ಎಡಿಎಫ್‌ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಮತ್ತು ಎಚ್‌ಡಿಎಫ್‌ಸಿ ಸಮೂಹ ಕಂಪೆನಿಗಳು ಬರುತ್ತವೆ.







