ಅಮೇರಿಕಾದಲ್ಲಿ ಗುಂಡಿನ ದಾಳಿಗೆ ಮೈಸೂರಿನ ಯುವಕ ಬಲಿ

ಮೈಸೂರು,ನ.29: ಅಮೇರಿಕಾದಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದ ಮೈಸೂರಿನ ಯುವಕನೋರ್ವ ಅಪರಿಚಿತ ವ್ಯಕ್ತಿಯ ಗುಂಡಿನ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ.
ಮೈಸೂರಿನ ಕುವೆಂಪುನಗರದ ಪಿ ಅಂಡ್ ಎಫ್ ಬ್ಲಾಕ್ ಮನುಜ ಪಥ ರೋಡ್ ನಲ್ಲಿ ವಾಸವಿರುವ ಸುರೇಶ್ ಚಂದ್ ಅವರ ಪುತ್ರ ಅಭಿಷೇಕ್(25) ಮೃತಪಟ್ಟ ಯುವಕ. ಅಭಿಷೇಕ್ ಮೈಸೂರಿನ ವಿದ್ಯಾ ವಿಕಾಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮಾಡಿದ್ದರು. ಬಳಿಕ ಎಂಎಸ್ ಮಾಡಲು ಒಂದೂವರೆ ವರ್ಷದ ಹಿಂದೆ ಅಮೇರಿಕಾಗೆ ತೆರಳಿದ್ದರು. ಅಲ್ಲಿನ ಸ್ಯಾನ್ ಬರ್ನಾಡಿಯೋದಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದರು.
ವ್ಯಾಸಂಗದ ಅವಧಿಯ ಬಿಡುವಿನ ವೇಳೆ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ರೆಸಿಡೆಂಟ್ ಒಂದರಲ್ಲಿ ಉಳಿದುಕೊಂಡಿದ್ದರು. ಈ ಮಧ್ಯೆ ನಿನ್ನೆ ಕ್ಯಾಲಿಫೋರ್ನಿಯಾದಲ್ಲಿ ಅಭಿಷೇಕ್ ಅಪರಿಚಿತ ವ್ಯಕ್ತಿಯ ಗುಂಡೇಟಿಗೆ ಬಲಿಯಾಗಿದ್ದಾರೆ. ಅಮೇರಿಕಾದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು ಮೃತದೇಹ ಆಸ್ಪತ್ರೆಗೆ ರವಾನಿಸಿದ್ದಾರೆ ಎನ್ನಲಾಗಿದೆ.
ಮೈಸೂರಿನಲ್ಲಿರುವ ಅಭಿಷೇಕ್ ಪೋಷಕರು ಆತಂಕಕ್ಕೀಡಾಗಿದ್ದಾರೆ. ಮೃತ ಅಭಿಷೇಕ್ ಅಂತ್ಯಕ್ರಿಯೆಯನ್ನು ಅಮೇರಿಕಾದಲ್ಲೇ ಮಾಡಲು ಅಭಿಷೇಕ್ ಪೋಷಕರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.







