ಎರಡನೇ ಬಾರಿಗೆ ಕೆ.ಜೆ.ಜಾರ್ಜ್ ವಿರುದ್ಧ ಈಡಿಗೆ ದಾಖಲೆ ಸಲ್ಲಿಕೆ

ಬೆಂಗಳೂರು, ನ.29: ತೆರಿಗೆ ವಂಚನೆ ಆರೋಪದಡಿ ಮಾಜಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಜಾರಿ ನಿರ್ದೇಶನಾಲಯ(ಈಡಿ) ಕಚೇರಿಗೆ ಎರಡನೇ ಬಾರಿಗೆ ದಾಖಲೆಗಳನ್ನು ಕರ್ನಾಟಕ ರಾಷ್ಟ್ರ ಸಮಿತಿ ಸದಸ್ಯರು ಸಲ್ಲಿಕೆ ಮಾಡಿದ್ದಾರೆ.
ಶುಕ್ರವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ಡಿ, 10 ರಿಂದ 15 ವರ್ಷಗಳ ಕಾಲ ಕೆ.ಜೆ.ಜಾರ್ಜ್ ಅವರ ವ್ಯವಹಾರಗಳ ದಾಖಲೆ ಕಲೆ ಹಾಕಲಾಗಿದೆ. ತೆರಿಗೆ ಕಳ್ಳತನ ಮಾಡಿರುವುದು ದಾಖಲೆಯಲ್ಲಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಮಹತ್ವದ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದರು.
ನೂರಾರು ಕೋಟಿ ವ್ಯವಹಾರದ ದಾಖಲೆಗಳಿದ್ದು, ಕೆಲ ಬ್ಯಾಂಕ್‌ಗಳಿಂದ ಜಾರ್ಜ್ ಅವರು ಸಾಲವನ್ನು ಪಡೆದಿದ್ದಾರೆ. ಈ ಸಾಲ ಮರುಪಾವತಿಗಾಗಿ ಇತರೆ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಆಗಿದೆ. ತೆರಿಗೆ ವಂಚನೆ ಮಾಡುವ ಸಲುವಾಗಿ ಇತರೆ ದೇಶಗಳಿಗೆ ಹಣ ವರ್ಗಾವಣೆ ಆಗಿರುವ ದಾಖಲೆಗಳನ್ನು ನೀಡಿದ್ದೇವೆ. ಇದನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ತೇಜೋವಧೆ ಆರೋಪದಡಿ ಕೆ.ಜೆ.ಜಾರ್ಜ್ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲಿಸುವುದಾಗಿ ಹೇಳಿದ್ದಾರೆ. ಆದರೆ, ಇದುವರೆಗೂ ಈ ಸಂಬಂಧ ಯಾವುದೇ ರೀತಿಯ ನೋಟಿಸ್ ಬಂದಿಲ್ಲ. ಅಲ್ಲದೆ, ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದ ಅವರು, ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ 20 ಪುಟಗಳ ದಾಖಲೆಗಳನ್ನು ನೀಡಿದ್ದೇನೆ ಎಂದು ಮಾಹಿತಿ ನೀಡಿದರು.







