ಲಂಚಕ್ಕೆ ಬೇಡಿಕೆ ಆರೋಪ: ಅಂಬೇಡ್ಕರ್ ಅಭಿವೃದ್ದಿ ನಿಗಮದ ವ್ಯವಸ್ಥಾಪಕಿ ಎಸಿಬಿ ಬಲೆಗೆ

ಬೆಂಗಳೂರು, ನ.29: ಐರಾವತ ಯೋಜನೆಯಡಿ ಎಸ್ಸಿ-ಎಸ್ಟಿ ಸಮುದಾಯದ ಯುವಕರಿಗಾಗಿ ಕಾರು ಖರೀದಿಸಲು ನೀಡುವ ಸಬ್ಸಿಡಿ ಹಣ ಬಿಡುಗಡೆಗಾಗಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಸಿಕ್ಕಿಬಿದಿದ್ದಾರೆ.
ಇಲ್ಲಿನ ರಾಜಾಜಿನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ ಕಚೇರಿಯ ಜಿಲ್ಲಾ ವ್ಯವಸ್ಥಾಪಕಿ ಎ.ಸರೋಜಾದೇವಿ ಎಂಬುವರ ವಿರುದ್ಧ ಎಸಿಬಿ ಮೊಕದ್ದಮೆ ದಾಖಲು ಮಾಡಿದೆ.
ನಗರದ ನಿವಾಸಿಯೊಬ್ಬರು, ಐರಾವತ ಯೋಜನೆಯಡಿ ಕಾರು ಖರೀದಿಸಲು ಸಬ್ಸಿಡಿ ಹಣಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ, ಸದ್ಯಕ್ಕೆ ನಮ್ಮಲ್ಲಿ ಹಣ ಇಲ್ಲ ಎಂದು ಅರ್ಜಿದಾರರಿಗೆ ಹೇಳಿದಲ್ಲದೆ, ಹನುಮಂತು ಎಂಬುವರನ್ನು ಭೇಟಿ ಮಾಡುವಂತೆ ಎ.ಸರೋಜಾದೇವಿ ಹೇಳಿದ್ದರು ಎನ್ನಲಾಗಿದೆ.
ಬಳಿಕ, ಹನುಮಂತು ಎಂಬಾತನನ್ನು ಅರ್ಜಿದಾರ ಭೇಟಿ ಮಾಡಿದಾಗ, 30 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ಶುಕ್ರವಾರ ಕಾರ್ಯಾಚರಣೆ ನಡೆಸಿದ ಎಸಿಬಿ ಪೊಲೀಸ್ ಅಧೀಕ್ಷಕ ಜಿನೇಂದ್ರ ಖನಗಾ, ಖಾಸಗಿ ವ್ಯಕ್ತಿ ಲಂಚ ಸ್ವೀಕಾರ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ತಪಾಸಣೆ ಕೈಗೊಂಡಾಗ ಹನುಮಂತು ಎಂಬಾತನ ಬಳಿ 20 ಸಾವಿರ ರೂ. ನಗದು ಪತ್ತೆಯಾದರೆ, ಎ.ಸರೋಜಾದೇವಿ ಬಳಿ 1 ಲಕ್ಷ ರೂ. ನಗದು ಸಿಕ್ಕಿದೆ. ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಎಸಿಬಿ ತಿಳಿಸಿದೆ.







