ಪದವಿ ಪೂರ್ವ ಕಾಲೇಜುಗಳು ಕಡ್ಡಾಯವಾಗಿ 25 ಸಾವಿರ ಚದರಡಿ ಭೂಮಿ ಹೊಂದಿರಲೇಬೇಕು: ಹೈಕೋರ್ಟ್

ಬೆಂಗಳೂರು, ನ.29: ರಾಜ್ಯದ ಪದವಿ ಪೂರ್ವ ಕಾಲೇಜುಗಳು ಕನಿಷ್ಠ 25 ಸಾವಿರ ಚದರಡಿ ಭೂಮಿಯನ್ನು ಕಡ್ಡಾಯವಾಗಿ ಹೊಂದಿರಲೇಬೇಕೆಂಬ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ವಿಭಾಗೀಯ ನ್ಯಾಯಪೀಠವು ಎತ್ತಿ ಹಿಡಿದಿದೆ.
ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ, ಆದೇಶವನ್ನು ಪ್ರಕಟಿಸಿದೆ. ಕಡ್ಡಾಯ ನಿಯಮ 4(2)(ಎ) ಹಾಗೂ ಪದವಿ ಪೂರ್ವ ಕಾಲೇಜು ನಿಯಮ 2006ರ ಅನ್ವಯ ಪದವಿ ಪೂರ್ವ ಕಾಲೇಜುಗಳು ಕನಿಷ್ಠ 25 ಸಾವಿರಚದರಡಿ ಭೂಮಿಯನ್ನು ಹೊಂದಿರಲೇಬೇಕೆಂಬ ಕಾನೂನನ್ನು ರೂಪಿಸಲಾಗಿದ್ದು, ಈ ಕಾನೂನು ಸಂವಿಧಾನದ ವಿರುದ್ಧವಾಗಿದೆ ಎಂದು ದಾವಣಗೆರೆಯ ಚೇತನಾ ಎಜುಕೇಶನ್ ಟ್ರಸ್ಟ್ ಮೇಲ್ಮನವಿ ಸಲ್ಲಿಸಿತ್ತು. ಆದರೆ, ವಿಭಾಗೀಯ ನ್ಯಾಯಪೀಠವು ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಎತ್ತಿ ಹಿಡಿದು ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳೂ ಕನಿಷ್ಠ 25 ಸಾವಿರ ಚದರ ಅಡಿ ಭೂಮಿಯನ್ನು ಹೊಂದಿರಲೆಬೇಕೆಂದು ಆದೇಶ ಹೊರಡಿಸಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಹೊರಡಿಸಿರುವ ಆದೇಶದ ಪ್ರಕಾರ ರಾಜ್ಯದ 13 ಕಾಲೇಜುಗಳ ಭೂಮಿಯ ವ್ಯಾಪ್ತಿಯು 2,700 ಚದರ ಅಡಿಗಳಿಂದ 8 ಸಾವಿರ ಚದರ ಅಡಿಗಳಷ್ಟಿದ್ದು, ಇದು ನಿಗದಿತ ಕನಿಷ್ಠ 25 ಸಾವಿರ ಚದರಡಿಗಿಂತಲೂ ಕಡಿಮೆಯಿದೆ. ಈ ಎಲ್ಲ ಕಾಲೇಜುಗಳಿಗೂ ನೋಟಿಸ್ ನೀಡಲಾಗಿತ್ತು.





