ನ.30ರಂದು ಮೋಹನ್ ಮಾರ್ನಾಡ್‌ಗೆ ನಾಟಕ ಅಕಾಡಮಿ ಪ್ರಶಸ್ತಿ ಪ್ರದಾನ

ಮುಂಬೈ, ನ.29: ಮುಂಬೈ ರಂಗಭೂಮಿಯ ಖ್ಯಾತ ಕಲಾವಿದ ಮೋಹನ್ ಮಾರ್ನಾಡ್ ಅವರು ಕರ್ನಾಟಕ ನಾಟಕ ಅಕಾಡಮಿಯ 2018ನೇ ಸಾಲಿನ ಪ್ರಶಸ್ತಿಗೆ ಪಾತ್ರರಾಗಿದ್ದು, ನ.30ರಂದು ಅಪರಾಹ್ನ 2:30ಕ್ಕೆ ಮುಂಬೈಯ ಕಲಿನಾ ಕ್ಯಾಂಪಸ್‌ನ ಕುಸುಮಾಗ್ರಜ ಮರಾಠಿ ಭವನದಲ್ಲಿ ಜರುಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಎಂಬತ್ತರ ದಶಕದಿಂದಲೇ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಮಾರ್ನಾಡ್ ದೂರದರ್ಶನ ಏಕ್ ಕಹಾನಿ, ಅಧಿಕಾರ್, ಎಂ. ಎಸ್.ಸತ್ಯು ಅವರ ಕಯರ್, ಚಾಣಕ್ಯ ಮತ್ತಿತರ ಟಿವಿ ಧಾರಾವಾಹಿಗಳಲ್ಲಿ ನಟಿಸುವ ಮೂಲಕವೂ ಸುದ್ದಿಯಲ್ಲಿದ್ದವರು. ಭೂತದ ಇಲ್‌ಲ್, ಉರುಳು, ಅಂಬೆ, ಮೃಗತೃಷ್ಣ ಮತ್ತಿತರ ನಾಟಕಗಳಲ್ಲಿ ನಟಿಸಿರುವ ಮಾರ್ನಾಡ್, ಸ್ವತಃ ನಾಟಕಗಳನ್ನು ನಿರ್ದೇಶಿಸಿ ನಟಿಸಿದ್ದಾರೆ. ನಲವತ್ತರ ನಲುಗು, ಟಿಪ್ಪು ಸುಲ್ತಾನ್ ಮೋಹನ್ ಮಾರ್ನಾಡ್ ನಿರ್ದೇಶಿಸಿದ ಪ್ರಮುಖ ನಾಟಕಗಳು. 90 ದಶಕದಲ್ಲೇ ಮೋಹನ್ 200್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದಾರೆ.
ತಾನೋರ್ವ ನಿರ್ದೇಶಕನಾದರೂ ಇತರರ ನಿರ್ದೇಶನಗಳಲ್ಲಿ ತುಂಬಾ ಖುಷಿಯಿಂದ ಅಭಿನಯಿಸುವ ಮೋಹನ ಮಾರ್ನಾಡ್ ಬಲ್ಪುನಕುಲುಲಾ ಗಿಡ್ಪುನಕುಲುಲಾ... ತುಳು ಏಕಾಂಕ ನಾಟಕದಲ್ಲಿ ಮೂರು ವಿಭಿನ್ನ ಪಾತ್ರಗಳಲ್ಲಿ ತನ್ನದೇ ಛಾಪು ಬೀರಿದ್ದಾರೆ. ಮೋಹನ್ ಹಲವು ನಾಟಕಗಳನ್ನು ಕೂಡ ರಚಿಸಿದ್ದಾರೆ.
ಡಬ್ಬಿಂಗ್, ಕಂಠದಾನಗಳ ಮೂಲಕ ಅವರು ಹಲವು ನಟರ ಮಾತುಗಳಿಗೆ ಜೀವ ತುಂಬಿದ್ದಾರೆ. ಕರ್ನಾಟಕ ಸಂಘ ಮುಂಬಯಿ ಇಲ್ಲಿ ಜೊತೆ ಕಾರ್ಯದರ್ಶಿಯಾಗಿದ್ದು, ನಂತರ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ, ತ್ರಿಕಾಯ್, ಲಿಂಟಾಸ್, ಮುದ್ರಾ ಮತ್ತಿತರರ ಪ್ರಮುಖ ಜಾಹೀರಾತು ಸಂಸ್ಥೆಗಳಲ್ಲಿ ಕಂಠದಾನದ ಮೂಲಕ ಗುರುತಿಸಿಕೊಂಡಿದ್ದಾರೆ.







