ಬಸ್ಸಿನಲ್ಲೇ ಮೃತಪಟ್ಟ ಪ್ರಯಾಣಿಕ
ಉಡುಪಿ, ನ. 29: ಊರಿಗೆ ಬರಲೆಂದು ಬಸ್ಸಿನಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕರೊಬ್ಬರು ಊರು ತಲುಪುವ ಮುನ್ನವೇ ಬಸ್ಸಿನಲ್ಲೇ ಮಲಗಿದ ಸ್ಥಿತಿಯಲ್ಲೇ ಮೃತಪಟ್ಟ ಘಟನೆ ಬ್ರಹ್ಮಾವರ ಸಮೀಪದ ಕೆ.ಜಿ.ರೋಡ್‌ನಿಂದ ವರದಿಯಾಗಿದೆ.
ಬೆಂಗಳೂರಿನ ಹೊಟೇಲ್ ಒಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಶಂಕರ ಪೂಜಾರಿ (55) ಎಂಬವರು ಬ್ರಹ್ಮಾವರ ಸಮೀಪದ ಐರೋಡಿಯ ತನ್ನ ಊರಿಗೆ ಬರಲೆಂದು ನಿನ್ನೆ ರಾತ್ರಿ 9:20ಕ್ಕೆ ಖಾಸಗಿ ಬಸ್ಸೊಂದರಲ್ಲಿ ಪ್ರಯಾಣ ಬೆಳೆಸಿದ್ದರು. ಆದರೆ ಇಂದು ಮುಂಜಾನೆ 5:10ರ ಸುಮಾರಿಗೆ ಕೆ.ಜಿ.ರೋಡ್ ಬಳಿ ನೋಡಿದಾಗ ಬಸ್ಸಿನ ಮೇಲಿನ ಸ್ಲೀಪಿಂಗ್ ಕೋಚ್‌ನಲ್ಲಿ ಅಂಗಾತನೆ ಮಲಗಿದ ಸ್ಥಿತಿಯಲ್ಲೇ ಮೃತಪಟ್ಟಿದ್ದು ಕಂಡುಬಂತು.
ಶಂಕರ್ ಪೂಜಾರಿ ಅವರಿಗೆ 2 ವರ್ಷದಿಂದ ಬಿ.ಪಿ.ಹಾಗೂ ಶುಗರ್ ಕಾಯಿಲೆ ಇದ್ದು, ಹೃದಯ ಸಂಬಂಧಿ ಕಾಯಿಲೆಯಿಂದ, ಹೃದಯಾಘಾತದಿಂದ ಬಸ್ಸಿನಲ್ಲಿ ಪ್ರಯಾಣಿಸುತಿದ್ದಾಗ ಮೃತಪಟ್ಟಿರಬೇಕೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





