ಪರೀಕ್ಷೆಯಲ್ಲಿ ಸಾಮೂಹಿಕ ನಕಲು ತಡೆಗೆ 'ಜಾಮರ್'

ಬೆಂಗಳೂರು, ನ.29: ಪರೀಕ್ಷಾ ಕೇಂದ್ರಗಳಲ್ಲಿ ಪಾರದರ್ಶಕ ಪರೀಕ್ಷೆ ನಡೆಸುವ ಉದ್ದೇಶದಿಂದ ಸಾಮೂಹಿಕ ನಕಲು ತಡೆಯಲು ಜಾಮರ್ ಅಳವಡಿಕೆ ಕಡ್ಡಾಯಗೊಳಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.
ಪರೀಕ್ಷೆಗಳಲ್ಲಿ ನಕಲು ತಡೆಗೆ ಹಲವು ಕ್ರಮಗಳನ್ನು ಕೈಗೊಂಡರೂ, ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಬ್ಲೂಟೂತ್, ಇಂಟರ್‌ನೆಟ್ ಸೇರಿದಂತೆ ಹಲವು ಅನ್ಯಮಾರ್ಗಗಳ ಮೂಲಕ ನಕಲು ನಡೆಯುತ್ತಲೇ ಇದೆ. ಅದಕ್ಕಾಗಿ ಹೊಸ ತಂತ್ರಜ್ಞಾನವನ್ನೂ ಕಂಡುಕೊಳ್ಳಲಾಗಿದೆ.
ಈ ಹಿನ್ನೆಲೆಯಲಿ 2016 ರಲ್ಲಿಯೇ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಪರೀಕ್ಷಾ ಕೇಂದ್ರದಲ್ಲಿ ಜಾಮರ್ ಅಳವಡಿಕೆ ಅನಿವಾರ್ಯತೆಯನ್ನು ಪ್ರತಿಪಾದಿಸಿದೆ. ಇದೀಗ ಕರ್ನಾಟಕ ಪದವಿ ಹಂತದ ಪರೀಕ್ಷೆಗಳಲ್ಲಿ ಜಾಮರ್ ಕಡ್ಡಾಯ ಅಳವಡಿಕೆ ಸಂಬಂಧ ನವೆಂಬರ್ ಮೊದಲ ವಾರದಲ್ಲಿ ಸಭೆ ನಡೆದಿದೆ. ಅಲ್ಲಿ, ಜಾಮರ್ ಅಳವಡಿಕೆ ಬಗ್ಗೆ ಪ್ರಾಥಮಿಕ ಹಂತದ ಚರ್ಚೆ ನಡೆದಿದೆ.
ಮುಂದಿನ ಹಂತದಲ್ಲಿ ಉನ್ನತ ಶಿಕ್ಷಣ ಸಚಿವರು, ಇಲಾಖಾ ಪ್ರಧಾನ ಕಾರ್ಯದರ್ಶಿ ಕಾರ್ಯ ಯೋಜನೆ ಬಗ್ಗೆ ವಿಚಾರ ವಿನಿಮಯ ಮಾಡುವರು. ಇದೇ 27 ಕ್ಕೆ ದಿಲ್ಲಿಯಿಂದ ಅಧಿಕಾರಿಗಳು ಆಗಮಿಸಬೇಕಿತ್ತು. ಜಾಮರ್ ತಂತ್ರಜ್ಞಾನ ನೀಡುವ ಬಿಇಎಲ್ ಹಾಗೂ ಉನ್ನತ ಶಿಕ್ಷಣ ಸಚಿವರ ಜತೆ ಸಭೆಯೂ ನಿಗದಿಯಾಗಿತ್ತು. ಆದರೆ, ಉಪ ಚುನಾವಣೆ ಹಿನ್ನೆಲೆಯಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ಆ ಸಭೆ ನಡೆಯುವ ಸಾಧ್ಯತೆಯಿದೆ.
ಮೆಡಿಕಲ್ ಮತ್ತು ಎಂಜಿನಿಯರಿಂಗ್ ಸೇರಿ ಪದವಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಹಲವು ತಂತ್ರಜ್ಞಾನದ ಮೂಲಕ ನಕಲು ಮಾಡುವುದನ್ನು ಪತ್ತೆ ಹಚ್ಚಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳ ನಕಲು ನೋಡಿ ಇಡೀ ವಿವಿಗಳೇ ದಂಗಾಗಿದ್ದವು.
ಬಿಇಎಲ್‌ಗೆ ಜವಾಬ್ದಾರಿ ಸಾಧ್ಯತೆ?: ಜಾಮರ್‌ಗಳನ್ನು ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಸಿದ್ಧಪಡಿಸಿ ಒದಗಿಸುವ ಜವಾಬ್ದಾರಿಯನ್ನು ಬಿಇಎಲ್‌ಗೆ ನೀಡಲಾಗುತ್ತದೆ. ಎಷ್ಟು ಸಂಖ್ಯೆಯಲ್ಲಿ ಜಾಮರ್ ಬೇಕು, ಯಾವ ಹಂತದ ಪರೀಕ್ಷೆಗಳಲ್ಲಿ ಜಾಮರ್ ಅಳವಡಿಸಿಕೊಳ್ಳಬೇಕು, ಇದರ ಹಣಕಾಸು ಹೊಣೆ ಏನು, ಬಾಡಿಗೆ ರೂಪದಲ್ಲಿ ಪಡೆಯಬೇಕಾ, ಇಡೀ ರಾಜ್ಯಕ್ಕೆ ಖರೀದಿಸಬೇಕಾ, ಎಸೆಸೆಲ್ಸಿ ಹಾಗೂ ಪಿಯು ಪರೀಕ್ಷೆಗೂ ಬಳಸಬೇಕಾ, ಇದರ ನಿರ್ವಹಣೆ ಹೇಗೆ ಎಂಬ ವಿಚಾರಗಳ ಕುರಿತು ಸರಕಾರ ಇನ್ನೂ ತೀರ್ಮಾನ ಮಾಡಿಲ್ಲ.







