ಸಿದ್ದರಾಮಯ್ಯ ವಿರುದ್ಧ ಆರೋಪಕ್ಕೆ ಅಹಿಂದ ವರ್ಗ ಖಂಡನೆ

ಬೆಂಗಳೂರು, ನ.29: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರ ಪಡೆದು ಉನ್ನತ ಸ್ಥಾನ ಅಲಂಕರಿಸಿ, ಈಗ ಬಿಜೆಪಿ ಪಕ್ಷ ಸೇರ್ಪಡೆಯಾಗಿ ಅವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಮುಕುಡಪ್ಪ ಅವರ ನಡೆಯನ್ನು ಕರ್ನಾಟಕ ರಾಜ್ಯ ಅಹಿಂದ ವರ್ಗಗಳ ಒಕ್ಕೂಟ ಖಂಡಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎನ್.ವಿ.ನರಸಿಂಹಯ್ಯ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರಿಂದ ಸಹಕಾರ ಪಡೆದಿದ್ದಾರೆ. ಆದರೆ, ಈಗ ಬಿಜೆಪಿ ಸೇರಿ, ಅಹಿಂದ ಸಂಘಟನೆ ಎಂಬ ಹೆಸರಿನಲ್ಲಿ ಸಿದ್ದರಾಮಯ್ಯ ವಿರುದ್ಧವೇ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಮುಕುಡಪ್ಪ ಎಂಬುವವರನ್ನು ಕರ್ನಾಟಕ ಲೋಕ ಸೇವಾ ಅಯೋಗಕ್ಕೆ ಸದಸ್ಯರನ್ನಾಗಿ ಮಾಡಿದವರು ಸಿದ್ದರಾಮಯ್ಯ. ಮುಕಡಪ್ಪಕಡತವನ್ನು ರಾಜ್ಯಪಾಲರಿಗೆ ಕಳುಹಿಸಿದಾಗ ಇವರ ನೇಮಕ ಮಾಡಲು ಮೀನಾಮೇಷ ನೋಡಿದರು. ಅಧಿಕಾರಿಗಳು ರಾಜ್ಯಪಾಲರ ಗಮನಕ್ಕೆ ಈ ವಿಷಯವನ್ನು ತರಲೇ ಇಲ್ಲ. ಆಗ ಸಿದ್ದರಾಮಯ್ಯರೇ ರಾಜಭವನಕ್ಕೆ ತೆರಳಿ, ಇವರನ್ನು ಆಯೋಗದ ಸದಸ್ಯರನ್ನಾಗಿಸಿದ್ದರು ಎಂದರು.
ಕಳೆದ ಆರು ವರ್ಷಗಳಿಂದ ಸದಸ್ಯತ್ವವನ್ನು ಅನುಭವಿಸಿ ಈಗ ರಾಜಕೀಯ ಅಧಿಕಾರಕ್ಕಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅಲ್ಲದೆ ಬಿಜೆಪಿ ಅಹಿಂದ ಘಟಕದ ಅಧ್ಯಕ್ಷನೆಂದು ಸ್ವಯಂ ಘೋಷಣೆ ಮಾಡಿಕೊಂಡು ಸಿದ್ದರಾಮಯ್ಯರವನ್ನು ಟೀಕಿಸುತ್ತಿದ್ದಾರೆ. ಅಧಿಕಾರದ ಆಸೆಗಾಗಿ ಚುನಾವಣೆಯಲ್ಲಿ ಕೋಮುವಾದಿ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಸಾಮಾಜಿಕ, ಜಾತ್ಯತೀತ ತತ್ವಗಳ ವಿರುದ್ಧವಾಗಿರುವ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವುದು ಜಾತ್ಯತೀತ ತತ್ವಕ್ಕೆ ದ್ರೋಹ ಬಗೆದಂತೆ. ಒಕ್ಕೂಟದ ಪದಾಧಿಕಾರಿಗಳಾದ ನಾವು ಜಾತ್ಯತೀತ, ಸಾಮಾಜಿಕ ನ್ಯಾಯದ ಪರವಾಗಿರುವ ಪಕ್ಷಗಳಿಗೆ ಬೆಂಬಲಿಸುತ್ತೇವೆ ಎಂದರು.
ಈ ವೇಳೆ ಒಕ್ಕೂಟದ ಮಾವಳಿ ಶಂಕರ್, ಎಣ್ಣೆಗೆರೆ ವೆಂಕಟರಾಮಯ್ಯ, ಲಕ್ಷ್ಮಿ ನಾರಾಯಣ ನಾಗವಾರ, ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಡಾ.ದಾವೂದ್ ಇಕ್ಬಾ್ ಸೇರಿದಂತೆ ಇನ್ನಿತರರು ಇದ್ದರು.







