ಐಎನ್‌ಎಕ್ಸ್ ಮೀಡಿಯಾ ಪ್ರಕರಣ: 6 ಅಧಿಕಾರಿಗಳಿಗೆ ಜಾಮೀನು

ಹೊಸದಿಲ್ಲಿ, ನ.29: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ದಿಲ್ಲಿಯ ನ್ಯಾಯಾಲಯ 6 ಅಧಿಕಾರಿಗಳಿಗೆ ಮಧ್ಯಾಂತರ ಜಾಮೀನು ಮಂಜೂರುಗೊಳಿಸಿದೆ. ಇವರು ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಕೇಂದ್ರ ವಿತ್ತಸಚಿವರಾಗಿದ್ದ ಸಂದರ್ಭ ಅವರೊಂದಿಗೆ ಕಾರ್ಯ ನಿರ್ವಹಿಸಿದ್ದರು.
ನೀತಿ ಆಯೋಗದ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಸಿಂಧುಶ್ರೀ ಖುಲ್ಲರ್, ವಿತ್ತ ಸಚಿವರ ಕಚೇರಿಯಲ್ಲಿ ವಿಶೇಷ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಮಾಜಿ ಅಧಿಕಾರಿ ಪ್ರದೀಪ್ ಕುಮಾರ್ ಬಗ್ಗಾ, ವಿದೇಶ ಹೂಡಿಕೆ ಉತ್ತೇಜನಾ ಮಂಡಳಿ(ಎಫ್‌ಐಪಿಬಿ)ಯ ಮಾಜಿ ನಿರ್ದೇಶಕ ಪ್ರಬೋಧ್ ಸಕ್ಸೇನಾ, ಎಫ್‌ಐಪಿಬಿ ಘಟಕದ ಮಾಜಿ ಶಾಖಾಧಿಕಾರಿ ಅಜೀತ್ ಕುಮಾರ್ ಡಂಗ್‌ಡಂಗ್, ಎಫ್‌ಐಪಿಬಿ ಘಟಕದ ಮಾಜಿ ಉಪಕಾರ್ಯದರ್ಶಿ ರಬೀಂದ್ರ ಪ್ರಸಾದ್ ಮತ್ತು ವಿದೇಶ ವ್ಯವಹಾರ ವಿಭಾಗದ ಮಾಜಿ ಜಂಟಿ ಕಾರ್ಯದರ್ಶಿ ಅನೂಪ್ ಕೆ ಪೂಜಾರಿಗೆ ಮಧ್ಯಂತರ ಜಾಮೀನು ನೀಡಲಾಗಿದೆ.
2 ಲಕ್ಷ ರೂ. ವೈಯಕ್ತಿಕ ಬಾಂಡ್ ಮತ್ತು ಇಷ್ಟೇ ಮೊತ್ತದ ಜಾಮೀನು ಮುಚ್ಚಳಿಕೆ ಒದಗಿಸುವಂತೆ ನ್ಯಾಯಾಲಯ ತಿಳಿಸಿದ್ದು , ಈ ಅಧಿಕಾರಿಗಳು ಸಲ್ಲಿಸಿರುವ ಜಾಮೀನು ಅರ್ಜಿಯ ಬಗ್ಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 17ಕ್ಕೆ ನಿಗದಿಗೊಳಿಸಲಾಗಿದೆ.





