ಪ್ರತ್ಯೇಕ ರಸ್ತೆ ಅಪಘಾತ: ಮೂವರು ಮೃತ್ಯು, ಇಬ್ಬರಿಗೆ ಗಾಯ

ಶಿವಮೊಗ್ಗ, ನ. 29: ಜಿಲ್ಲೆಯ ಶಿವಮೊಗ್ಗ ಹಾಗೂ ಸಾಗರ ತಾಲೂಕುಗಳ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ, ಶುಕ್ರವಾರ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೂವರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗ ವರದಿ: ನಗರದ ಹೊರವಲಯ ತ್ಯಾವರೆಕೊಪ್ಪ ಹುಲಿ-ಸಿಂಹಾಧಾಮದ ಬಳಿ ಖಾಸಗಿ ಪ್ರಯಾಣಿಕ ಬಸ್‍ವೊಂದು ಢಿಕ್ಕಿ ಹೊಡೆದ ಪರಿಣಾಮ, ಬೈಕ್‍ನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ತ್ಯಾವರೆಕೊಪ್ಪ ಸಮೀಪದ ಮುದ್ದಿನಕೊಪ್ಪ ನಿವಾಸಿಗಳಾದ ದಶರಥ (40) ಹಾಗೂ ಚಂದ್ರಾನಾಯ್ಕ (42) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರಿಬ್ಬರು ಕೂಲಿ ಕಾರ್ಮಿಕರಾಗಿದ್ದಾರೆ. ಕೆಲಸವೊಂದಕ್ಕೆ ತೆರಳಿ, ಮನೆಗೆ ಹಿಂದಿರುಗುವ ವೇಳೆ ಸಾಗರದ ಕಡೆಯಿಂದ ಶಿವಮೊಗ್ಗ ನಗರದೆಡೆಗೆ ಆಗಮಿಸುತ್ತಿದ್ದ ವಿಆರ್‍ಎಲ್ ಸಂಸ್ಥೆಗೆ ಸೇರಿದ ಬಸ್ ಢಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಗರ ವರದಿ: ತಾಲೂಕಿನ ಕಾಸ್ಪಾಡಿ ಗ್ರಾಮದ ಬಳಿ ಚಾಲನೆಯ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮರವೊಂದಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಯುವತಿ ಸ್ಥಳದಲ್ಲಿಯೇ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಸಣ್ಣ ಅಮಾನಿಕೆರೆ ಬಡಾವಣೆಯ ನಿವಾಸಿ ಪಾವನ (20) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಪಾವನಿಯವರ ಜೊತೆ ವಿವಾಹ ನಿಶ್ಚಯವಾಗಿದ್ದ ಮಧುಕುಮಾರ್ ಹಾಗೂ ಸ್ನೇಹಿತೆ ಗಂಗಮ್ಮ ಎಂಬುವರು ಗಾಯಗೊಂಡಿದ್ದಾರೆ. ಇವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಕಾರು ಚಾಲನೆ ಮಾಡುತ್ತಿದ್ದ ಮಧುಕುಮಾರ್‍ರವರು ಚಾಲನೆಯ ನಿಯಂತ್ರಣ ಕಳೆದುಕೊಂಡು ರಸ್ತೆ ತಿರುವಿನಲ್ಲಿ ಮರಕ್ಕೆ ಢಿಕ್ಕಿ ಹೊಡೆಸಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







